ಕಿಯೆವ್/ಮಾಸ್ಕೋ: ಯೂಕ್ರೇನ್ ಮೇಲೆ ರಷ್ಯಾ ಸಮರ ತೀವ್ರಗೊಂಡಿದ್ದು, ಶುಕ್ರವಾರ ಪೂರ್ವ ಡೊನೆಟ್ಸ್ ಪ್ರಾಂತ್ಯದ ಕ್ರಮಟೋರ್ಸ್ ಪಟ್ಟಣದ ರೈಲ್ವೆ ನಿಲ್ದಾಣದ ಮೇಲೆ ರಾಕೆಟ್ ದಾಳಿ ನಡೆದಿದೆ. ಇದರಲ್ಲಿ 5 ಮಕ್ಕಳು ಸೇರಿ 50 ಜನ ಮೃತಪಟ್ಟಿದ್ದಾರೆ. ಈ ನಿಲ್ದಾಣದ ಮೂಲಕ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದ್ದ ವೇಳೆ ರಷ್ಯಾ ಸೇನೆ ದಾಳಿ ನಡೆಸಿದೆ ಎಂದು ಯೂಕ್ರೇನ್ ಹೇಳಿದೆ.
ಕಿಯೆವ್ನ ಉತ್ತರ ಭಾಗದ ವಸತಿ ಪ್ರದೇಶಗಳಲ್ಲಿ ರಷ್ಯಾ ಸೇನೆಯ ನರಹತ್ಯಾಕಾಂಡದ ದೃಶ್ಯಾವಳಿಗಳು ಯೂಕ್ರೇನ್ ಸೇನೆಯ ಗಮನಕ್ಕೆ ಬಂದಿತ್ತು. ಇದರ ಬೆನ್ನಿಗೆ ನಾಗರಿಕರಿಗೆ ರಷ್ಯಾ ದಾಳಿಯ ಕುರಿತು ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ರಷ್ಯಾ ಸೇನೆ ರೈಲ್ವೆ ನಿಲ್ದಾಣಕ್ಕೆ ದಾಳಿ ನಡೆಸಿತ್ತು. ಈ ದಾಳಿಗೆ ಸಂಬಂಧಿಸಿದ ಫೋಟೋ ಗಳನ್ನು ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಪೂರ್ವ ಯೂಕ್ರೇನ್ ಟಾರ್ಗೆಟ್?: ಪೂರ್ವ ಯೂಕ್ರೇನ್ನ ಡೊನ್ಬಾಸ್ ಪ್ರಾಂತ್ಯ ಗುರಿಯಾಗಿಸಿ ರಷ್ಯಾ ಸೇನೆ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಕಿಯೆವ್ ಸಮೀಪ ನಾಗರಿಕರ ಮೇಲಿನ ಹಲ್ಲೆ, ಹತ್ಯಾಕಾಂಡಗಳನ್ನು ಗಮನಿಸಿದರೆ ಇನ್ನಷ್ಟು ಘೊರ ದೃಶ್ಯಗಳನ್ನು ಜಗತ್ತು ನೋಡಬೇಕಾಗಿ ಬರಬಹುದು ಎಂದು ಫ್ರೆಂಚ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಎಚ್ಚರಿಸಿದ್ದಾರೆ.
ರಾಜತಾಂತ್ರಿಕರಿಗೆ ಗೇಟ್ಪಾಸ್: ಯೂಕ್ರೇನ್ನಲ್ಲಿ ನರಹತ್ಯಾಕಾಂಡಕ್ಕೆ ಪ್ರತಿಯಾಗಿ ಜಪಾನ್ ಕಠಿಣ ನಿಲುವು ತಾಳಿದೆ. ತನ್ನ ದೇಶದಲ್ಲಿರುವ ಎಂಟು ರಷ್ಯನ್ ರಾಜತಾಂತ್ರಿಕರನ್ನು ದೇಶದ ಹೊರ ಹೋಗುವಂತೆ ಸೂಚಿಸಿರುವುದಾಗಿ ಜಪಾನ್ ಸರ್ಕಾರ ಹೇಳಿದೆ.
ಇಸ್ತಾಂಬುಲ್ನಲ್ಲಿ ಮಹತ್ವದ ಸಭೆ: ಯೂಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಂಡ ಬೆನ್ನಿಗೆ ನ್ಯಾಟೋ ಮಿತ್ರರಾಷ್ಟ್ರಗಳಲ್ಲಿ ಕಳವಳ ಆತಂಕ ಹೆಚ್ಚಾಗಿದೆ. ಹೀಗಾಗಿ ಇಸ್ತಾಂಬುಲ್ನಲ್ಲಿ ಟರ್ಕಿ, ಬ್ರಿಟನ್ ಮತ್ತು ಇಟಲಿಯ ರಕ್ಷಣಾ ಸಚಿವರು ತುರ್ತು ಸಭೆ ನಡೆಸಿದರು. ಸಭೆಯಲ್ಲಿ ರಷ್ಯಾ-ಯೂಕ್ರೇನ್ ಸಮರ ಮತ್ತು ಮೂರು ನ್ಯಾಟೋ ರಾಷ್ಟ್ರಗಳ ನಡುವಿನ ಭದ್ರತಾ ಸಹಕಾರದ ಕುರಿತು ಚರ್ಚೆ ನಡೆಯಿತು.
ಬುಚಾ ಹತ್ಯಾಕಾಂಡ ಕಳವಳಕಾರಿ: ಬುಚಾ ಪ್ರದೇಶಗಳಲ್ಲಿ ನಡೆದಿರುವ ಹತ್ಯಾಕಾಂಡ ನಿಜಕ್ಕೂ ಕಳವಳಕಾರಿ. ಅಲ್ಲಿನ ಫೋಟೋಗಳು ಆತಂಕ ಮೂಡಿಸುವಂತೆ ಇವೆ. ಯೂಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿಮಾತುಕತೆ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಟರ್ಕಿ ತಿಳಿಸಿದೆ.
ಪುತಿನ್ ಪುತ್ರಿಯರಿಗೆ ನಿರ್ಬಂಧ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪುತ್ರಿಯರಾದ ಮರಿಯಾ ವೊರೊನ್ಟ್ಸೋವಾ, ಕತ್ರೀನಾ ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿತ್ತು. ಯುರೋಪ್ ಒಕ್ಕೂಟ ಕೂಡ ಈಗ ಇವರ ಮೇಲೆ ನಿರ್ಬಂಧ ಹೇರಿದೆ.
ಚೆರ್ನಿಹಿವ್ ಪಟ್ಟಣ ನಾಶ: ರಷ್ಯಾ ಪಡೆಗಳು ಯೂಕ್ರೇನ್ನ ರ್ಚೆನಿಹಿವ್ ಪಟ್ಟಣವನ್ನು ಸಂಪೂರ್ಣ ನಾಶಗೊಳಿಸಿವೆ. ಸ್ಮಶಾನದಂತೆ ಆಗಿರುವ ಪಟ್ಟಣದಲ್ಲಿ ಅಳಿದುಳಿದ ಜನರು ನಿರಾಶ್ರಿತರಾಗಿದ್ದು, ಆಹಾರ ಇಲ್ಲದೆ ಕಂಗಾಲಾಗಿದ್ದಾರೆ. ಯೂಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಗುರುವಾರ ಈ ವಿಚಾರ ಪ್ರಸ್ತಾಪಿಸಿದ್ದು, ಎಲ್ಲ ಪಟ್ಟಣಗಳಲ್ಲೂ ಇಂಥ ಸನ್ನಿವೇಶವನ್ನು ನಿರೀಕ್ಷಿಸಬಹುದು ಎಂದು ಎಚ್ಚರಿಸಿದರು.
ಯುದ್ಧೋಪಕರಣ ದುಬಾರಿ: ರಷ್ಯಾದ ಯುದ್ಧೋಪಕರಣಗಳಿಗೆ ಪರ್ಯಾಯ ಎನಿಸುವ ಯುದ್ಧೋಪಕರಣ ಗಳು ಬಲು ದುಬಾರಿ. ಕಚ್ಚಾ ತೈಲ ದರ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ದುಬಾರಿ ಆಗಿದೆ. ರಷ್ಯಾ ಹೊರತಾಗಿ ಬೇರೆ ಎಲ್ಲಿಂದ ಇವುಗಳನ್ನು ಖರೀದಿಸಿದರೂ ಭಾರತದ ಮಟ್ಟಿಗೆ ಅದು ದುಬಾರಿ ಎನಿಸುತ್ತದೆ ಎಂದು ಅಮೆರಿಕಕ್ಕೆ ಭಾರತ ಖಾಸಗಿಯಾಗಿ ಮನವರಿಕೆ ಮಾಡಿದೆ.
ಸಾರ್ವಕಾಲಿಕ ಗರಿಷ್ಠಕ್ಕೆ ಆಹಾರ ದರ: ಜಾಗತಿಕ ಆಹಾರ ದರ ಪ್ರಮಾಣ ಮಾರ್ಚ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಯೂಕ್ರೇನ್ ಮೇಲೆ ರಷ್ಯಾ ದಾಳಿ ಕಾರಣ ಗೋಧಿ ಮತ್ತು ದವಸ ಧಾನ್ಯಗಳ ರಫ್ತು ಜಾಲಕ್ಕೆ ಹೊಡೆತ ಬಿದ್ದಿದೆ ಎಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಹೇಳಿದೆ. ಆಹಾರ ದರ ಸೂಚ್ಯಂಕ ಪ್ರಕಾರ, ಹಣದುಬ್ಬರ ಪ್ರಮಾಣ ಕಳೆದ ತಿಂಗಳು ಶೇಕಡ 159.3 ಅಂಶ ಏರಿದೆ. ಫೆಬ್ರವರಿ ತಿಂಗಳ ಹಣದುಬ್ಬರ ಪ್ರಮಾಣಕ್ಕಿಂತ ಶೇಕಡ 12.6 ಹೆಚ್ಚಳವಾಗಿದೆ. ಫೆಬ್ರವರಿ ತಿಂಗಳ ಹಣದುಬ್ಬರ ಪ್ರಮಾಣ 1990ಕ್ಕೆ ಹೋಲಿಸಿದರೆ ಸಾರ್ವಕಾಲಿಕ ಗರಿಷ್ಠ ಮಟ್ಟದ್ದಾಗಿತ್ತು.