ಮಕ್ಕಳಿಗೆ ನೀಡುವ ಬೇಸಿಗೆ, ದಸರಾ ಸೇರಿದಂತೆ ಇತರ ರಜಾ ದಿನಗಳಲ್ಲಿ ಅವರಿಗೆ ಮತ್ತೆ ಪಠ್ಯದ ಹೊರೆ ಹೊರೆಸಬಾರದು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಕಲಾಮಂದಿರದಲ್ಲಿ ಸದ್ವಿದ್ಯಾ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ ವತಿಯಿಂದ ಗುರುವಾರ ಆಯೋಜಿಸಿದ್ದ 51ನೇ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದರ ಬದಲು ಇಂದಿನ ಕಾಲಕ್ಕೆ ತಕ್ಕಂತೆ ಅವರಿಗೆ ಜೀವನ ಕೌಶಲ್ಯ ತರಬೇತಿ ನೀಡಬೇಕು. ಇದರಿಂದ ಅವರ ಜೀವನಶೈಲಿಯೂ ಬದಲಾಗುತ್ತದೆ ಎಂದು ಸಲಹೆ ನೀಡಿದರು.
ಎಲ್ಲ ಶಾಲೆಗಳಲ್ಲಿ ವಾರ್ಷಿಕ ಶಾಲಾ ವರದಿಯನ್ನು ನೋಡುತ್ತಾರೆ. ಆದರೆ, 10 ವರ್ಷಗಳ ಹಿಂದೆ ಶಾಲೆಯಲ್ಲಿ ಶಿಕ್ಷಣ ಪಡೆದು ತೆರಳಿದ ವಿದ್ಯಾರ್ಥಿಗಳು ಇಂದು ಏನು ಮಾಡುತ್ತಿದ್ದಾರೆ ಎಂಬ ವರದಿಯನ್ನು ಸಿದ್ಧಪಡಿಸುತ್ತಿಲ್ಲ. ಅದನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೀಗೆ ಬೆಸ್ಟ್ ಅವಾರ್ಡ್ ನೀಡಿ ಪ್ರೋತ್ಸಾಹಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮೈಸೂರು ರಾಜ್ಯ, ಸಂಸ್ಕೃತಿ, ರಾಜರ ಪರಂಪರೆ ಮತ್ತು ಅವರ ಕೊಡುಗೆಯನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪ್ರೊ.ಎಂ.ಕೆ.ನರಹರಿ ಬಾಬು, ಗೌರವ ಕಾರ್ಯದರ್ಶಿ ಎಂ.ಡಿ.ಗೋಪಿನಾಥ್, ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಭಟ್, ಎಸ್.ಬಾಲಾಜಿ, ಡಾ.ನಳಿನಿಚಂದ್ರ ಇದ್ದರು.