ನ್ಯೂಸ್

ರಕ್ಷಣಾ ಕಾರ್ಯದ ಹಿಂದೆ ರಾಜತಾಂತ್ರಿಕ ಜಾಣ್ಮೆ; ಗಮನಸೆಳೆದಿದೆ ಭಾರತದ ಕಾರ್ಯಾಚರಣೆ

ನವದೆಹಲಿ/ಮಾಸ್ಕೋ/ಕಿಯೆವ್: ಯೂಕ್ರೇನ್ ಮೇಲೆ ರಷ್ಯಾ ಸಮರ ಸಾರಿದ್ದು, ಅಮೆರಿಕ ಮತ್ತು ಜಗತ್ತಿನ ಪ್ರಬಲ ಶಕ್ತಿಗಳು ರಷ್ಯಾ ಮೇಲೆ ಮುಗಿಬೀಳಲು ಸನ್ನದ್ಧವಾಗಿವೆ. ಅದಕ್ಕೂ ಮುಂಚಿತವಾಗಿ ರಷ್ಯಾ ಮೇಲೆ ಜಾಗತಿಕ ವೇದಿಕೆಗಳ ಮೂಲಕ ನಿರ್ಬಂಧ ಹೇರುವ, ವಿವಿಧ ದೇಶಗಳನ್ನು ಸಂಘಟಿಸುವ ಕೆಲಸವನ್ನು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಮಾಡುತ್ತಿವೆ. ಚೀನಾ, ಪಾಕಿಸ್ತಾನ ಮತ್ತು ಕೆಲವು ದೇಶಗಳು ರಷ್ಯಾ ಪರ ನಿಂತಿವೆ. ಇವುಗಳ ನಡುವೆ, ಭಾರತದ ನಿಲುವು ಏನು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದೆ ಇದುವರೆಗೂ ಗೊಂದಲಕ್ಕೆ ಒಳಗಾಗಿದ್ದ ಅಮೆರಿಕಕ್ಕೆ ಭಾರತದ ರಾಜತಂತ್ರದ ಅರಿವಾಗಿದೆ. ಭಾರತೀಯರ ಸುರಕ್ಷಿತ ವಾಪಸಾತಿಯ ಬಗ್ಗೆ ಭಾರತ ಸರ್ಕಾರ ಬಹಳಷ್ಟು ಮುತುವರ್ಜಿ ವಹಿಸಿರುವುದು ದೇಶದೊಳಗಿನ ರಾಜಕೀಯ ವಿರೋಧಿಗಳಿಗೂ ಗುರುವಾರ ಮನವರಿಕೆ ಆಗಿರುವುದು ವಿಶೇಷ.

ರಕ್ಷಣಾ ಸಾಮಗ್ರಿ ಪೂರೈಕೆಗೆ ಅಡ್ಡಿ ಇಲ್ಲ: ಯೂಕ್ರೇನ್- ರಷ್ಯಾ ಸಂಘರ್ಷ ನಡೆಯುತ್ತಿದ್ದರೂ, ಭಾರತಕ್ಕೆ ರಕ್ಷಣಾ ಪೂರೈಕೆಯಲ್ಲಿ ಯಾವುದೆ ಹಿನ್ನಡೆ ಆಗುವುದಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ. ಚೀನಾ ಮತ್ತು ಪಾಕಿಸ್ತಾನಗಳಿಂದ ನೇರ ಬೆದರಿಕೆ ಎದುರಿಸುತ್ತಿರುವ ಭಾರತಕ್ಕೆ ರಷ್ಯಾ ಸುಖೋಯ್, ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಸೇರಿ ಹಲವು ರಕ್ಷಣಾ ಸಾಮಗ್ರಿಗಳನ್ನು ಒದಗಿಸುವ ಒಪ್ಪಂದ ಮಾಡಿಕೊಂಡಿದೆ. ಇದನ್ನು ಪೂರೈಸುವುದರಲ್ಲಿ ಯಾವುದೇ ಅಡ್ಡಿ ಆಗದಂತೆ ನೋಡಿಕೊಳ್ಳ ಲಾಗುವುದು ಎಂದು ರಷ್ಯಾ ಭರವಸೆ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ರಷ್ಯಾದಿಂದಲೂ ಭಾರತೀಯರು ವಾಪಸ್: ರಷ್ಯಾದಲ್ಲೂ ವಿವಿಧ ಮೆಡಿಕಲ್ ಕಾಲೇಜು ಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿ ದ್ದಾರೆ. ಅವರು ಕೂಡ ಅಲ್ಲಿಂದ ಭಾರತಕ್ಕೆ ಆಗಮಿಸುತ್ತಿದ್ದಾರೆ. ಯೂಕ್ರೇನ್ ಮೇಲೆ ರಷ್ಯಾ ಸಮರ ಸಾರಿ ರುವ ಕಾರಣ, ಪರಿಸ್ಥಿತಿ ಗಂಭೀರವಾಗಿದೆ. ಅಣ್ವಸ್ತ್ರ ಬಳಕೆಯ ಎಚ್ಚರಿಕೆಯನ್ನೂ ರಷ್ಯಾ ನೀಡುತ್ತಿದ್ದು, ಹೀಗಾಗಿ ಅಲ್ಲಿರುವುದು ಕೂಡ ಸುರಕ್ಷಿತವಲ್ಲ. ಹೀಗಾಗಿ ಭಾರತಕ್ಕೆ ವಾಪಸಾಗುತ್ತಿದ್ದೇವೆ ಎಂದು ಅಲ್ಲಿಂದ ಬಂದ ಅನೇಕ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಜೈಶಂಕರ್​ರನ್ನು ಪ್ರಶಂಸಿಸಿದ ತರೂರ್: ಯೂಕ್ರೇನ್​ನಲ್ಲಿರುವ ಭಾರತೀಯರನ್ನು ವಾಪಸ್ ಕರೆತರುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲೇ ವಿದೇಶಾಂಗ ಸಚಿವ ಎಸ್.ಜೈಶಂಕರ್ ನೇತೃತ್ವದ 21 ಸದಸ್ಯರ ಸಂಸದೀಯ ಸಮಿತಿ ಗುರುವಾರ ಸಭೆ ಸೇರಿತು. ಅಲ್ಲಿ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಜತೆಗೂಡಿ ಜೈಶಂಕರ್ ಪರಿಸ್ಥಿತಿಯ ಪ್ರಸ್ತುತಿ ಮಾಡಿದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಆನಂದ್ ಶರ್ವ, ಶಶಿತರೂರ್ ಕೂಡ ಈ ಸಮಿತಿಯ ಸದಸ್ಯರು. ಸಮಿತಿಯ ಸಮಾಲೋಚನ ಸಭೆಯಲ್ಲಿ ಸರ್ಕಾರದ ನಿಲುವು, ನಿರ್ಣಯಗಳ ವಿವರ ನೀಡಿದ ಎಸ್.ಜೈಶಂಕರ್, ಎಲ್ಲರಿಂದ ಸಹಮತವನ್ನು ಪಡೆದರು. ಸಭೆಯ ಬಳಿಕ ಟ್ವೀಟ್ ಮಾಡಿದ ಶಶಿತರೂರ್, ಅತ್ಯುತ್ತಮ ಸಮಾಲೋಚನಾ ಸಭೆ. ನಾವೆಲ್ಲರೂ ಒಂದು. ಸ್ಪಷ್ಟ ಮತ್ತು ಒಮ್ಮತದ ಸಂದೇಶವನ್ನು ಜಗತ್ತಿಗೆ ರವಾನಿಸುತ್ತಿದ್ದೇವೆ. ಭಾರತದ ನಿಲುವಿನ ವಿಚಾರದಲ್ಲಿ ಸ್ಪಷ್ಟವಾದ ಮತ್ತು ವಿಸõತವಾದ ವಿವರಣೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದರೆ ಅನುಕೂಲವಾದೀತು ಎಂದು ಹೇಳಿದ್ದಾರೆ. ಈ ಸಮಾಲೋಚನೆ ಸಭೆಗೆ ಮುನ್ನ, ಕಾಂಗ್ರೆಸ್ ನಾಯಕರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಎರಡೇ ವಿಷಯಗಳತ್ತ ಭಾರತದ ಚಿತ್ತ: ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಬುಧವಾರ ತಡರಾತ್ರಿ ರಷ್ಯಾ ವಿರುದ್ಧದ ನಿರ್ಣಯ ಮತಕ್ಕೆ ಹಾಕಿದಾಗ ಗೈರಾದ 35 ರಾಷ್ಟ್ರಗಳ ಪೈಕಿ ಭಾರತವೂ ಒಂದು. ರಷ್ಯಾ-ಯೂಕ್ರೇನ್ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಈ ವಿಚಾರದಲ್ಲಿ ಅದು ಎರಡೇ ಎರಡು ವಿಚಾರಗಳ ಕಡೆಗೆ ಹೆಚ್ಚಿನ ಗಮನಹರಿಸಿದೆ. ಬಿಕ್ಕಟ್ಟು ಪರಿಹರಿಸಲು ರಾಜತಾಂತ್ರಿಕ ನಿರ್ಣಯದ ಸಾಧ್ಯತೆಯನ್ನೆ ನೋಡುವಂತೆ ಹೇಳುತ್ತಿದೆ. ಇನ್ನೊಂದು, ಯೂಕ್ರೇನ್​ನಲ್ಲಿರುವ 18,000ದಷ್ಟು ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿ. ಹೀಗಾಗಿ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು ತನ್ನ ಹಿತವನ್ನು ಅದು ಕಾಪಾಡಿಕೊಳ್ಳುತ್ತಿದೆ ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಡೊನಾಲ್ಡ್ ಲು ಟೀಕಿಸಿದ್ದಾರೆ.

ಸ್ವರಕ್ಷಣೆಗೆ ಭಾರತೀಯರ ಬಳಕೆ?: ಭಾರತೀಯರನ್ನು ಸುರಕ್ಷಿತವಾಗಿ ಯೂಕ್ರೇನ್​ನಿಂದ ಕಳುಹಿಸುವ ಬದಲು ಅವರನ್ನು ಸ್ವರಕ್ಷಣೆಗಾಗಿ ಯೂಕ್ರೇನ್ ಯೋಧರು ಬಳಸುತ್ತಿದ್ದಾರೆ. ಭಾರತೀಯರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ರಷ್ಯಾ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ರಷ್ಯಾ ಸೇನೆ ಆರೋಪಿಸಿದೆ. ಆದರೆ, ಯೂಕ್ರೇನ್ ಈ ರೀತಿ ಭಾರತೀಯರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಮಾಹಿತಿ ತನಗೆ ಲಭಿಸಿಲ್ಲ. ಯೂಕ್ರೇನ್​ನ ಯಾವುದೇ ಭಾಗದಿಂದಲೂ ಇಂತಹ ಮಾಹಿತಿ ಲಭ್ಯವಾಗಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ರಷ್ಯನ್ ಲಿಬರಲ್ ರೇಡಿಯೊ ಬಂದ್: ರಷ್ಯಾದ ಪ್ರಮುಖ ಮಾಧ್ಯಮ ಸಂಸ್ಥೆ ಮತ್ತು ಲಿಬರಲ್ ರೇಡಿಯೋ ಸ್ಟೇಷನ್ ಇಖೋ ಮೋಸ್ಕ್​ವಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಯೂಕ್ರೇನ್ ಸಂಬಂಧಿತ ವರದಿ ಪ್ರಸಾರ ಮಾಡಿದ್ದ ಕಾರಣ ಈ ನಿರ್ಣಯವನ್ನು ಸಂಸ್ಥೆಯ ಆಡಳಿತ ಮಂಡಳಿ ತೆಗೆದುಕೊಂಡಿದೆ. ರೇಡಿಯೋ ಸ್ಟೇಷನ್​ನ ಎಡಿಟರ್ ಇನ್ ಚೀಫ್ ಅಲೆಕ್ಸಿ ವೆನೆಡಿಕ್ಟೋವ್ ಇದನ್ನು ಖಾತರಿಪಡಿಸಿದ್ದು, ರೇಡಿಯೋ ಚಾನೆಲ್ ಮತ್ತು ಅದರ ವೆಬ್​ಸೈಟ್ ಸಂಪೂರ್ಣವಾಗಿ ಬಂದ್ ಆಗಿರಲಿದೆ ಎಂದು ಹೇಳಿದ್ದಾರೆ.

ಯೂಕ್ರೇನ್ ಸ್ಥಿತಿ ಉಪಗ್ರಹ ಚಿತ್ರಣ: ಯೂಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಹೊಸ ಉಪಗ್ರಹ ಚಿತ್ರಗಳನ್ನು ಮ್ಯಾಕ್ಸರ್ ಬಿಡುಗಡೆ ಮಾಡಿದೆ. ಇದರಲ್ಲಿ, ಅಗತ್ಯ ವಸ್ತುಗಳಿಗಾಗಿ ಜನರು ಶಾಪ್​ಗಳ ಎದುರು ಸರದಿ ನಿಂತಿರುವುದು, ಸೇನಾ ವಾಹನಗಳ ಸರದಿ ಸಾಲು, ರ್ಚೆನಿವ್, ಕಿಯೇವ್​ಗಳಲ್ಲಿ ಸೂಪರ್ ಮಾರ್ಕೆಟ್​ಗಳ ಹೊರಗೆ ಜನದಟ್ಟಣೆ, ಯೂಕ್ರೇನ್ ಗಡಿಭಾಗಗಳಲ್ಲಿ ಹಂಗರಿ, ಸ್ಲೊವಾಕಿಯಾ, ರೊಮೆನಿಯ ಗಡಿಗಳಲ್ಲಿ ಜನದಟ್ಟಣೆ ಮತ್ತು ಸಂಚಾರ ದಟ್ಟಣೆ ಕಂಡು ಬಂದಿದೆ.

  •  ಭಾರತೀಯ ವಾಯುಪಡೆಯ ನಾಲ್ಕು ವಿಮಾನಗಳಲ್ಲಿ ವಿದ್ಯಾರ್ಥಿಗಳು ಸೇರಿ 798 ಭಾರತೀಯರು ಭಾರತಕ್ಕೆ ವಾಪಸಾಗಿದ್ದಾರೆ. ರೊಮೆನಿಯಾದ ಬುಚಾರೆಸ್ಟ್, ಹಂಗೇರಿಯ ಬುಡಾಪೆಸ್ಟ್, ಪೋಲೆಂಡ್​ನ ಝೆಸ್​ಜೋವ್​ಗಳಿಂದ ಹೊರಟ ಸಿ-17 ವಿಮಾನ ದೆಹಲಿಯ ಹಿಂಡನ್ ವಾಯುನೆಲೆಯಲ್ಲಿ ಗುರುವಾರ ಬೆಳಗ್ಗೆ ಇಳಿದಿದೆ.
  •  ರಷ್ಯಾ ಗಡಿಭಾಗಕ್ಕೆ ಸನಿಹ ಇರುವ ಈಶಾನ್ಯ ಯೂಕ್ರೇನ್​ನ ಸುಮಿ ಪಟ್ಟಣದ ಸುಮಿ ಯೂನಿವರ್ಸಿಟಿಯಲ್ಲಿ 400ಕ್ಕೂ ಹೆಚ್ಚು ಭಾರತೀಯ ವೈದ್ಯ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಅವರು ಬಂಕರ್​ನಲ್ಲಿದ್ದು, ಅಲ್ಲಿಂದ ಹೊರಬರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಪೈಕಿ ಎಂಟು ವಿದ್ಯಾರ್ಥಿಗಳು ಭಾರತೀಯ ರಾಯಭಾರ ಕಚೇರಿಯನ್ನು ಸಂರ್ಪಸಿದ್ದು, ಬಳಿಕ ವಿಡಿಯೋ ಸಂದೇಶವನ್ನು ಸಾಮಾಜಿಕ ತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಇವರ ಕಾಲೇಜು ಕ್ಯಾಂಪಸ್ ನಲ್ಲೇ ಸ್ಪೋಟವಾಗಿರುವ ದೃಶ್ಯವಿದೆ.
  •  ಪೋಲೆಂಡ್ ಪ್ರವೇಶಿಸಲು ಫೆ.26ರಂದು ಗಡಿಭಾಗಕ್ಕೆ ಬಂದಿದ್ದ 100ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿನ ಪೊಲೀಸರು ಯೂಕ್ರೇನ್​ಗೆ ಹಿಮ್ಮೆಟ್ಟಿಸಿದ್ದಾರೆ. ಅವರನ್ನು ಬಳಿಕ ರೊಮಾನಿಯಾದ ನಿರಾಶ್ರಿತರ ಶಿಬಿರಕ್ಕೆ ತಲುಪಿಸಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಬೆಲಾರಸ್ ರಾಯಭಾರಿ ವೆಲಂಟಿನ್ ರಿಬಕೋವ್ ತಿಳಿಸಿದ್ದಾರೆ.
  •  ಮಾರ್ಚ್ 4-5ರಂದು ಉಡಾವಣೆಗೊಳ್ಳಲಿರುವ ರಷ್ಯಾದ ರಾಕೆಟ್​ನಲ್ಲಿದ್ದ ಕೆಲವು ರಾಷ್ಟ್ರಗಳ ಧ್ವಜವನ್ನು ಅಳಿಸಿಹಾಕಲಾಗಿದೆ. ಭಾರತದ ತಿರಂಗಾವನ್ನು ಉಳಿಸಿರುವ ರಷ್ಯಾದ ಬಾಹ್ಯಾಕಾಶ ಕೇಂದ್ರ ರೋಸ್ಕೋಸ್ಮೋಸ್, ಬೈಕೊನೂರ್​ನಿಂದ ರಾಕೆಟ್ ಉಡಾವಣೆ ಆಗಲಿದೆ. ಇದರಲ್ಲಿ ಒನ್​ವೆಬ್​ನ 36 ಉಪಗ್ರಹಗಳು ಇರಲಿವೆ. ಬ್ರಿಟನ್, ಅಮೆರಿಕಗಳನ್ನು ಈ ಯೋಜನೆಯಿಂದ ಹೊರಗಿಡಲು ರಷ್ಯಾ ಮುಂದಾಗಿದೆ.
  •  ಯೂಕ್ರೇನ್​ನಲ್ಲಿ ಖೇರ್ಸನ್, ರ್ಖಾವ್, ಕಿಯೆವ್, ರ್ಚೆನಿಹಿವ್, ಮರಿಯಪೋಲ್, ಮೆಲಿಟೊಪೊಲ್​ಗಳನ್ನು ರಷ್ಯಾ ಸೇನೆ ಸುತ್ತುವರಿದಿದೆ.
  •  ಚೀನಾ ಈಗ ಜಾಗತಿಕ ವಿದ್ಯಮಾನಗಳನ್ನು ಗಮನಿಸುತ್ತಿದ್ದು, ಅದು ತೈವಾನ್ ಮೇಲೆ ದಾಳಿ ನಡೆಸಲಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
  •  ಯೂಕ್ರೇನ್- ರಷ್ಯಾ ಸಮರದಲ್ಲಿ 9000 ರಷ್ಯನ್ನರ ಹತ್ಯೆ ಮಾಡಲಾಗಿದೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್
  • ಝೆಲೆನ್​ಸ್ಕಿ ಹೇಳಿದ್ದರು. ಆದರೆ, ರಷ್ಯಾ ಸೇನೆ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, 498 ಯೋಧರನ್ನು ಕಳೆದುಕೊಂಡಿರುವುದಾಗಿ ಘೋಷಿಸಿದೆ.