ಶೃಂಗೇರಿ: ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ನೀಡುವ ಅಮೂಲ್ಯವಾದ ಕೊಡುಗೆ ರಕ್ತದಾನ. ಪ್ರತಿಲಾಪೇಕ್ಷೆ ಇಲ್ಲದೆ ಸ್ವಯಂಪ್ರೇರಿತವಾಗಿ ಮಾಡುವ ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯ ಎಂದು ಶೃಂಗೇರಿ ಜಗದ್ಗುರು ಆಪ್ತಸಹಾಯಕ ಶ್ರೀ ಶಂ.ನ.ಕೃಷ್ಣಮೂರ್ತಿ ಹೇಳಿದರು.
ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ ಅಂಗವಾಗಿ ತಾಲೂಕು ಕಾರ್ಮಿಕ ಮಿತ್ರ ಬಳಗ ಹಾಗೂ ರಕ್ತದಾನಿಗಳ ವ್ಯಾಟ್ಸ್‌ಆ್ಯಪ್ ಗ್ರೂಪ್ ಆಶ್ರಯದಲ್ಲಿ ಭಾನುವಾರ ಶ್ರೀಮಠದ ಶಾರದಾಕೃಪಾದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತಕ್ಕೆ ಬೇಡಿಕೆ ಇದೆ. ರೋಗಿಗಳಿಗೆ ಅತಿ ಅವಶ್ಯಕತೆ ಇರುವ ಅಮೂಲ್ಯವಾದ ರಕ್ತವನ್ನು ದಾನ ಮಾಡುವವರ ಉನ್ನತ ಕಾರ್ಯ ಸರ್ವರಿಗೂ ಮಾದರಿಯಾಗಲಿ ಎಂದರು.
ತಾಲೂಕಿನ 93 ಮಂದಿ ರಕ್ತದಾನ ಮಾಡಿದರು. 59ನೇ ಬಾರಿ ರಕ್ತದಾನ ಮಾಡಿದ ಸಾಹಿತಿ ಬಿ.ಶಿವಶಂಕರ್ ಅವರನ್ನು ಗೌರವಿಸಲಾಯಿತು. ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆ ವೈದ್ಯ ಲಕ್ಷ್ಮೀನಾರಾಯಣ್, ಜೆಸಿಐ ಅಧ್ಯಕ್ಷ ಆಶೋಕ್, ಕಾರ್ಮಿಕ ಮಿತ್ರಬಳಗದ ಮುಖ್ಯಸ್ಥ ರಮೇಶ್ ಶೂನ್ಯ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ರೋಟರಿ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದ ಸ್ವಾಮಿ ಇತರರಿದ್ದರು.