ಶೃಂಗೇರಿ: ರಕ್ತದಾನ ಮತ್ತೊಬ್ಬರ ಜೀವ ಉಳಿಸುವ ಪುಣ್ಯದ ಕಾರ್ಯ. ಹೀಗಾಗಿ ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಬೇಕು ಎಂದು ಶ್ರೀಮಠದ ಅಧಿಕಾರಿ ಸತೀಶ್ ಭಟ್ ಹೇಳಿದರು.
ಕಾರ್ಮಿಕ ಮಿತ್ರ ಬಳಗ ಮತ್ತು ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ವರ್ಧಂತಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ನಾವು ನೀಡುವ ರಕ್ತ ಅನಾರೋಗ್ಯಪೀಡಿತರಿಗೆ, ಅಪಘಾತ ಸಂದರ್ಭದಲ್ಲಿ ನೆರವಿಗೆ ಬರುತ್ತದೆ ಎಂದರು.
ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಲಕ್ಷ್ಮೀನಾರಾಯಣ ಮಾತನಾಡಿ, ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿ ಇಲ್ಲದೆ ಇರುವುದರಿಂದ ರಕ್ತ ನೀಡುವುದಕ್ಕೆ ಹೆಚ್ಚಿನ ಜನ ಮುಂದಾಗುತ್ತಿಲ್ಲ. ನಾವು ನೀಡುವ ರಕ್ತ ರೋಗಿಗೆ ಜೀವದಾನ ನೀಡುತ್ತದೆ ಎಂದರು.
ಹಲವಾರು ಬಾರಿ ರಕ್ತದಾನ ಮಾಡಿದ ಶ್ರೀಧರ್ ಮತ್ತು ಬಿ.ಶಿವಶಂಕರ್ ಅವರಿಗೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್, ಉದ್ಯಮಿ ಖಾನಾರಾಂ ಪಟೇಲ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಅನಂದಸ್ವಾಮಿ, ಎಎಸ್‌ಐ ಮೋಹನ್ ರಾಜಣ್ಣ, ಪಪಂ ಮಾಜಿ ಸದಸ್ಯೆ ಸುಜಾತಾ, ಶೂನ್ಯ ರಮೇಶ್ ಉಪಸ್ಥಿತರಿದ್ದರು.