ರಂಗಕಲೆಯ ವೈಭೋಗ, ಜನಪದ ಉತ್ಸವದ ಸೊಗಡು, ಸಿನಿಮಾಗಳ ರಸಗವಳ, ಬಹುಮುಖಕ್ಕೆ ತೆರೆದುಕೊಂಡ ಮಕ್ಕಳ ಬಹುರೂಪಿ, ಆಕರ್ಷಿಸಿದ ದೇಸಿ ಆಹಾರ ಮೇಳ, ಕರಕುಶಲ ಪ್ರದರ್ಶನ...!
ಇದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬುಧವಾರ ಕಂಡು ಬಂದ ಚಂದದ ದೃಶ್ಯಾವಳಿ.. ಮಂಗಳವಾರವಷ್ಟೇ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ಕಲಾ ರಸಿಕರು ಬುಧವಾರ ರಂಗಾಯಣದ ಅಂಗಳದಲ್ಲಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೋಡಿ ಪುಳಕಿತರಾದರು.
ನಾಟಕೋತ್ಸವದಲ್ಲಿ ಎರಡನೇ ದಿನ ಬಹುಕಲೆಗಳ ರಂಗಿನ ಸಂಭ್ರಮ ಮೇಳೈಸಿತು. ಚಲನಚಿತ್ರೋತ್ಸವ, ನಾಟಕ ಪ್ರದರ್ಶನ ಮತ್ತು ಜನಪದ ಕಾರ್ಯಕ್ರಮವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ರಂಗಾಯಣ ಆವರಣದಲ್ಲಿ ಬೆಳಗ್ಗೆ ಹೆಚ್ಚಿನ ಚಟುವಟಿಕೆಗಳು ಇರಲಿಲ್ಲ. ಒಂದು ವೇಳೆ ಚಲನಚಿತ್ರೋತ್ಸವವಿಲ್ಲದಿದ್ದರೆ, ಸಂಜೆವರೆಗೂ ಇಲ್ಲಿ ಬಣಬಣ ಎನ್ನುತ್ತಿತ್ತು.