ರಂಗಾಯಣ ವತಿಯಿಂದ ಕಲಾವಿದರೊಂದಿಗೆ ತಿಂಗಳ ಮಾತುಕತೆ ಎಂಬ ವಿನೂತನ ‘ಮಾತಿನ ಮನೆ ಕಾರ್ಯಕ್ರಮ’ ಆರಂಭಿಸಲಾಗುತ್ತಿದ್ದು, ಪ್ರತಿ ತಿಂಗಳ ನಾಲ್ಕನೇ ಶನಿವಾರ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾಹಿತಿ ನೀಡಿದರು.
ರಾಜ್ಯದಲ್ಲಿನ ಅನೇಕ ಹಿರಿಯ ಕಲಾವಿದರು ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇನ್ನೂ ಹಲವರು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಅನುಭವವನ್ನು ಹೊಸ ತಲೆಮಾರಿಗೆ ತಿಳಿಸಿಕೊಡುವ ಸಲುವಾಗಿ ಮೈಸೂರು ರಂಗಾಯಣ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.26ರಂದು ಬೆಳಗ್ಗೆ 10.30ಕ್ಕೆ ಈ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ನಾಟಕಗಾರ ಕೋಟಿಗಾನಹಳ್ಳಿ ರಾಮಯ್ಯ ಚಾಲನೆ ನೀಡಲಿದ್ದಾರೆ. ಮೊದಲ ಕಾರ್ಯಕ್ರಮದಲ್ಲಿ ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ ಸರಸ್ವತಿ (ಜುಲೇಜಾ ಬೇಗಂ)ಭಾಗವಹಿಸಲಿದ್ದಾರೆ. ಇದರೊಂದಿಗೆ ಕಥೆಗಾರರೂ ಆದ ಅಬ್ದುಲ್ ರಶಿದ್ ಮಾತಕತೆ ನಡೆಸಿಕೊಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿರುವರು ಎಂದು ಹೇಳಿದರು.
ರಂಗಾಯಣ ನಡೆಸುವ ವಿವಿಧ ರಂಗಭೂಮಿ ಪ್ರಯೋಗಗಳು ಸಮಾಜದ ಎಲ್ಲ ವರ್ಗದ ಜನರಿಗೂ ತಲುಪುವ ಸಲುವಾಗಿ ಹತ್ತಾರು ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಅದರಂತೆ ಈ ಬಾರಿ ಮಕ್ಕಳಿಗಾಗಿ ವಿಶಿಷ್ಟ ನಾಟಕ ಸಿದ್ಧಪಡಿಸಲಾಗುತ್ತಿದೆ. ಮಕ್ಕಳಿಗೆ ಈಗಿರುವ ಸವಾಲು ಮತ್ತು ಸಾಧ್ಯತೆಯನ್ನು ಗಮನದಲ್ಲಿರಿಸಿಕೊಂಡು ಮಕ್ಕಳಿಗಾಗಿಯೇ ಪ್ರಯೋಗಕ್ಕೆ ಮುಂದಾಗಿದ್ದೇವೆ. ಎಲ್ಲ ಶಾಲೆಯ ಮಕ್ಕಳು ಈ ನಾಟಕವನ್ನು ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಚೆಕ್‌ಮೆಟ್ ನೂರನೇ ಪ್ರದರ್ಶನ:
ರಂಗಾಯಣದ ಹಿರಿಯ ಕಲಾವಿದರೇ ಅಭಿನಯಿಸಿರುವ ಚೆಕ್‌ಮೆಟ್ ನಾಟಕದ ನೂರನೇ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ. ಮುಂದಿನ ವಾರದಲ್ಲಿ ಈ ನಾಟಕದ ಪ್ರದರ್ಶನವಿದೆ. ರಂಗಾಯಣವನ್ನು ಗ್ರಾಮೀಣ ಪ್ರದೇಶಕ್ಕೂ ಕೊಂಡೊಯ್ಯುವ ಸಲುವಾಗಿ ತಾಲೂಕು ಮಟ್ಟದಲ್ಲಿ ಶಿಬಿರ ಆಯೋಜಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಮೂಲಸೌಕರ್ಯಗಳಿಲ್ಲದಿದ್ದರೂ ಇರುವ ಸೌಲತ್ತನ್ನು ಬಳಸಿಕೊಂಡು ಪ್ರಯೋಗಗಳನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಇದ್ದರು.