ಸಾಗರದಲ್ಲಿ ಆಯೋಜಿಸಿದ್ದ ನೆನಪಿನ ರಂಗಭೂಮಿ ಸಂಭ್ರಮ ನಾಟಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಾ. ಟಿ.ಎಸ್.ರಾಘವೇಂದ್ರ, ಅಶ್ವಿನಿಕುಮಾರ್, ಕೆ.ವಿ.ಜಯರಾಮ್, ಉಮೇಶ್ ಹಿರೇನೆಲ್ಲೂರು, ಬಿ.ಟಾಕಪ್ಪ, ಸರಸ್ವತಿ ನಾಗರಾಜ್ ಇತರರಿದ್ದರು. 
ನ್ಯೂಸ್

ರಂಗಭೂಮಿಯಿಂದ ಸಮಾಜಕ್ಕೆ ಸಂದೇಶ

ಸಾಗರ: ರಂಗಭೂಮಿಯ ಆಯಾಮ ಊರಿನ ಅಂತರಂಗವನ್ನು ತೆರೆದಿಡುತ್ತದೆ. ನಾಟಕ ಬರೀ ಮನೋರಂಜನೆಗೆ ಅಲ್ಲ, ಬದುಕಿಗೆ ಶಿಸ್ತನ್ನು ಕಲಿಸುತ್ತದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ಹೇಳಿದರು.

ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಸೋಮವಾರ ಅಭಿನಯ ಸಾಗರ, ರಂಗಮಂಚ ಕಾಗೋಡು ಇತರೆ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಎನ್.ಆರ್.ಮಾಸೂರು, ಕಾಗೋಡು ಅಣ್ಣಪ್ಪ, ಯೇಸುಪ್ರಕಾಶ್ ಸ್ಮರಣಾರ್ಥ ಆಯೋಜಿಸಿದ್ದ ನೆನಪಿನ ರಂಗಭೂಮಿ ಸಂಭ್ರಮ ಏಳು ದಿನಗಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿಯಲ್ಲಿ ಅಭಿನಯದ ಜತೆಗೆ ಬೇರೆ ಬೇರೆ ಸ್ವರೂಪಗಳು ಐಕ್ಯವಾಗಿರುತ್ತದೆ. ರಂಗಭೂಮಿ ಮೂಲಕ ಸಮಾಜಕ್ಕೆ ಸಂದೇಶ ಕೊಡುವ ಜತೆಗೆ ನೇಪಥ್ಯದಲ್ಲಿ ಕೆಲಸ ಮಾಡಲು ಅನೇಕ ಅವಕಾಶಗಳಿವೆ ಎಂದರು.

ಎನ್.ಆರ್.ಮಾಸೂರು ಅವರ ಕುರಿತ ರಂಗ ದೀಕ್ಷಿತ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಆರ್.ವಿಜಯವಾಮನ್, ರಂಗ ತಂಡಗಳು ಒಂದು ಊರಿನ ಸಭ್ಯತೆಯ ಪ್ರತಿಬಿಂಬಗಳಿದ್ದಂತೆ. ರಂಗ ತಂಡಗಳು ಸ್ವಪ್ರತಿಷ್ಠೆಯನ್ನು ಬಿಟ್ಟು ರಂಗ ಸಂಸ್ಕೃತಿ ಉಳಿಸಿ ಬೆಳೆಸಲು ಕೈಜೋಡಿಸಬೇಕು. ಇಂತಹ ಚಟುವಟಿಕೆಗಳಿಂದ ರಂಗಭೂಮಿ ಬೆಳೆಯಲು ಸಾಧ್ಯ ಎಂದರು.

ರಂಗಭೂಮಿ ಕಲಾವಿದರಾದ ಸಂತೋಷ್ ಆರ್. ಶೇಟ್, ಪುಟ್ಟು ಸಾಗರ್, ಜಿ.ಆರ್.ಪಂಡಿತ್, ಶಿವಾಜಿ, ಚೌಡಿಮನೆ ನಾಗರಾಜ್, ಗಣಪತಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ. ಟಿ.ಎಸ್.ರಾಘವೇಂದ್ರ, ಅಶ್ವಿನಿಕುಮಾರ್, ಕೆ.ವಿ.ಜಯರಾಮ್, ಉಮೇಶ್ ಹಿರೇನೆಲ್ಲೂರು, ಬಿ.ಟಾಕಪ್ಪ, ಸರಸ್ವತಿ ನಾಗರಾಜ್ ಇತರರಿದ್ದರು. ಪ್ರಭಾ ವೆಂಕಟೇಶ್ ಮತ್ತು ತಂಡದವರು ರಂಗಗೀತೆ ಹಾಡಿದರು. ಅಬಸೆ ದಿನೇಶಕುಮಾರ್ ಜೋಷಿ ಸ್ವಾಗತಿಸಿದರು. ಕೌಶಿಕ್ ಕಾನುಗೋಡು ನಿರೂಪಿಸಿದರು. ನಂತರ ಉದಯ ಕಲಾವಿದರು ಸಂಸ್ಥೆಯಿಂದ ಹುಲಗಪ್ಪ ಕಟ್ಟಿಮನಿ ನಿರ್ದೇಶನದಲ್ಲಿ, ಜಿ.ಎಸ್.ಭಟ್ ರಚನೆಯ ‘ಗ್ಲಾನಿ’ ನಾಟಕ ಪ್ರದರ್ಶನಗೊಂಡಿತು.