ನ್ಯೂಸ್

ರಂಗಭೂಮಿ ಸಂಗೀತ ನಿರ್ದೇಶಕ ವೆಂಕಟೇಶ ಕುಲಕರ್ಣಿ ಇನ್ನಿಲ್ಲ

ಬಾಗಲಕೋಟೆ: ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳ ಖ್ಯಾತ ಸಂಗೀತ ನಿರ್ದೇಶಕ, ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ವೆಂಕಟೇಶ ನಾರಾಯಣರಾವ್ ಕುಲಕರ್ಣಿ (82) ಶನಿವಾರ ಇಹಲೋಕ ತ್ಯಜಿಸಿದರು. ಈ ಮೂಲಕ ಪೌರಾಣಿಕ ನಾಟಕಗಳ ನಿರ್ದೇಶಕರ ಕೊಂಡಿಯೊಂದು ಕಳಚಿದಂತಾಗಿದೆ.

ರಂಗಭೂಮಿ ಕಲಾವಿದ, ಸಂಗೀತ ನಿರ್ದೇಶಕ, ಗಾಯಕರಾಗಿ ಪರಿಣಿತರಾಗಿದ್ದ ವೆಂಕಟೇಶ, ರಂಗಭೂಮಿಗೆ ಶ್ರೀಮಂತಿಕೆ ತಂದುಕೊಟ್ಟಿದ್ದರು. ರಾಜ್ಯದ ಹಲವು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ರಕ್ತರಾತ್ರಿ, ಗದಾಯುದ್ಧ, ಕುರುಕ್ಷೇತ್ರ ಮತ್ತಿತರ ಪೌರಾಣಿಕ ನಾಟಕಗಳನ್ನು ಯಶಸ್ವಿಯಾಗಿ ರಂಗದ ಮೇಲೆ ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಅವರು, ಹಲವಾರು ರಂಗಭೂಮಿ ಕಲಾವಿದರನ್ನು ನಾಡಿಗೆ ಪರಿಚಯಿಸಿದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಚಾಲುಕ್ಯ ಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.