ಸಾಗರ: ಬಹುಮಾಧ್ಯಮಗಳು ಜನರ ಬಳಿಗೆ ಬಂದ ಮೇಲೆ ರಂಗಾಸಕ್ತಿ ಕ್ಷೀಣಿಸಿತು. ಇದೆಲ್ಲದರ ಮಧ್ಯೆಯೂ ನಾಟಕೋತ್ಸವಗಳು ರಂಗಭೂಮಿಯ ಮಹತ್ವವನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತ್ತಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅಭಿನಯ ಸಾಗರ, ರಂಗ ಮಂಚ ಕಾಗೋಡು, ಜೋಷಿ ಫೌಂಡೇಷನ್ ಹಾಗೂ ಉದಯ ಕಲಾವಿದರು ಸಂಸ್ಥೆಯಿಂದ ಎನ್.ಆರ್.ಮಾಸೂರು, ಕಾಗೋಡು ಅಣ್ಣಪ್ಪ ಮತ್ತು ಯೇಸುಪ್ರಕಾಶ್ ಅವರ ಸ್ಮರಣಾರ್ಥ ಏರ್ಪಡಿಸಿದ್ದ 7 ದಿನಗಳ ನೆನಪಿನ ರಂಗ ಸಂಭ್ರಮ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡಿದರು.
ಧಾರಾವಾಹಿಗಳು, ಬಿಗ್‌ಬಾಸ್‌ನಂಥ ಶೋಗಳನ್ನು ನೋಡಲು ಜನರು ಆಸಕ್ತರಾಗಿದ್ದಾರೆ. ಆದರೆ ಇದರ ನಡುವೆ ನಾಟಕೋತ್ಸವಕ್ಕೆ ಜನರು ಉತ್ತಮ ಪ್ರತಿಕ್ರಿಯೆ ನೀಡಿರುವುದು ನಾಟಕದ ಬಗ್ಗೆ ಜನರು ಇನ್ನೂ ಆಸಕ್ತಿ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರು.
ವಿದ್ವಾಂಸ ಡಾ. ಜಿ.ಎಸ್.ಭಟ್ ಮಾತನಾಡಿ, ನಾಟಕೋತ್ಸವ ಯಶಸ್ವಿಯಾಗಿದ್ದು ಮೂರು ಪುಸ್ತಕಗಳು ಬಿಡುಗಡೆಯಾಗಿವೆ. ಕಾಗೋಡು ಅಣ್ಣಾಜಿ ಅವರ ಕುರಿತು ಪುಸ್ತಕ ಬರುತ್ತದೆ. 7 ದಿನಗಳ ಕಾಲ ಭಿನ್ನ ಅಭಿರುಚಿಯವರಿಗೆ ನಾಟಕ ಪ್ರದರ್ಶನ ಮೆಚ್ಚುಗೆಯಾಗಿದೆ. ಧ್ಯಾನಸ್ಥ, ಸಮಕಾಲೀನ, ಹಾಸ್ಯ, ಗಂಭೀರ ಪರಿಣಾಮದ ನಾಟಕಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ. ಪ್ರದರ್ಶನದ ಗುಣಮಟ್ಟ ಏರಿಕೆಯಾಗಿದೆ ಎಂದರು.
ಇದೇ ಸಂದರ್ಭ ರಂಗ ಸಾಧಕರಾದ ಎಂ.ಎಸ್.ಚಂದ್ರಶೇಖರ್, ದೇವೇಂದ್ರ ಬೆಳೆಯೂರು, ಕೆ.ಈಶ್ವರ ನಾಯ್ಕ್ ಕುಗ್ವೆ, ಮೇಕಪ್ ಸೋಮಣ್ಣ, ನಾಗರಾಜ ಸೂರನಗದ್ದೆ, ಅರುಣ್ ಘಾಟೆ ಅವರನ್ನು ಸನ್ಮಾನಿಸಲಾಯಿತು.
ನಾಟಕೋತ್ಸವ ಕುರಿತು ಡಾ. ಟಿ.ಎಸ್.ರಾಘವೇಂದ್ರ, ಗೋಪಿ ದೀಕ್ಷಿತ್, ಟಿ.ಎಸ್.ಪ್ರಸನ್ನ, ವಿವೇಕ್, ಶೈಲಜಾ ಪ್ರಕಾಶ್, ನಾಟಕೋತ್ಸವ ಸಮಿತಿ ಪ್ರಧಾನ ಸಂಚಾಲಕ ಮ.ಸ.ನಂಜುಂಡಸ್ವಾಮಿ ಮಾತನಾಡಿದರು. ಅಭಿನಯ ಸಾಗರದ ಗೌರವಾಧ್ಯಕ್ಷ ನಾರಾಯಣಮೂರ್ತಿ ಕಾನುಗೋಡು, ಕಾಗೋಡು ಸಂಸ್ಥೆ ಅಧ್ಯಕ್ಷ ಬಿ.ಟಾಕಪ್ಪ, ನಾಟಕ ನಿರ್ದೇಶಕ ಸಿ.ಟಿ.ಬ್ರಹ್ಮಾಚಾರ್, ಜೋಷಿ ಫೌಂಡೇಷನ್ ಅಧ್ಯಕ್ಷ ಅಬಸೆ ದಿನೇಶಕುಮಾರ್ ಜೋಷಿ, ವಿ.ಶಂಕರ್ ರಂಗಮಂಚದ ಕಾರ್ಯದರ್ಶಿ ನಾಗೇಂದ್ರ ಕುಮುಟಾ, ಡಾ. ಸರ್ಫ್ರಾಜ್ ಚಂದ್ರಗುತ್ತಿ, ಎಂ.ರಾಘವೇಂದ್ರ ಇದ್ದರು. ಕನ್ನಡ ಕಲಾ ಕೇಂದ್ರ ಮುಂಬಯಿ ತಂಡದಿಂದ ‘ಬಿಸಿಲು-ಬೆಳದಿಂಗಳು’ ನಾಟಕ ಪ್ರದರ್ಶನಗೊಂಡಿತು.