ಪ್ರಸ್ತುತ ಹೆಚ್ಚು ಯುವಕ-ಯುವತಿಯರು ರಂಗ ತರಬೇತಿಯನ್ನು ಪಡೆಯುತ್ತಿದ್ದು, ಇದು ಆಶಾದಾಯಕ ಬೆಳವಣಿಗೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ, ಕಾವಲು ಮನೆ ಸಾಂಸ್ಕೃತಿಕ ಕೇಂದ್ರ ಸಹಯೋಗದಲ್ಲಿ ಕಲಾಮಂದಿರದ ಆವರಣದ ಕಿರು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಆಧುನಿಕ ಕನ್ನಡ ರಂಗಭೂಮಿ ಪ್ರಯೋಗಶೀಲತೆ’ ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿಯ ಕಡೆ ಯುವಕರು ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಇತ್ತು. ಆದ್ದರಿಂದ ಯುವ ಜನಾಂಗ ರಂಗಭೂಮಿ ಕಡೆ ಬರುತ್ತಿದೆ ಎಂದರು.
ಹೊಸ ತಲೆಮಾರಿನ ಸಮುದಾಯಗಳ ಆಲೋಚನೆಗಳು ವಿಭಿನ್ನವಾಗಿವೆ. ಆಧುನಿಕತೆಯ ಪ್ರಭಾವದಿಂದ ತಂತ್ರಜ್ಞಾನವೂ ಬದಲಾಗುತ್ತಿದೆ. ಇದರ ಪರಿಣಾಮವಾಗಿ ಸಾಹಿತ್ಯ ಮತ್ತು ರಂಗಭೂಮಿಯಲ್ಲೂ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಕಲಾ ಪ್ರಕಾರಗಳು ತಂತ್ರಜ್ಞಾನವನ್ನು ಬಳಸಿಕೊಂಡು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ರಂಗಭೂಮಿ ವೈಶಿಷ್ಟ್ಯತೆಯಲ್ಲಿ ಹಿಮ್ಮುಖ ಚಲನೆಯ ಕಂಡು ಬರುತ್ತಿದೆ ಎನಿಸುತ್ತದೆ. ಏಕೆಂದರೆ ಭಾರತೀಯ ಪರಂಪರೆ ಹೆಸರಿನಲ್ಲಿ ವೈದಿಕ ಸಂಸ್ಕೃತಿಯನ್ನು ವೈಭವಿಕರಿಸಲಾಗುತ್ತಿದೆ ಎಂದರು.
ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಎಂ.ಎ.ಜಾಹೀದಾ, ಹಿರಿಯ ರಂಗಕರ್ಮಿಗಳಾದ ಶಿವಾಜಿರಾವ್ ಜಾಧವ್, ಕೃಷ ್ಣಜನಮನ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ಎಚ್.ತಲಕಾಡು ಇತರರಿದ್ದರು.