ಚಿತ್ರದುರ್ಗ: ಪರಿಸರ ಸಂರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಾಕಷ್ಟು ಯೋಜನೆಗಳು ಸಫಲವಾಗಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಸಾಲುಮರದ ತಿಮ್ಮಕ್ಕ ಮನವಿ ಮಾಡಿದರು.
ಭೋವಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವದ ಅಂಗವಾಗಿ ಗುರುಪೀಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಸಿಗಳನ್ನು ಬೆಳೆಸಲು ಮಗುವಿನಷ್ಟೇ ಕಾಳಜಿ ವಹಿಸಬೇಕು. ಗಿಡ-ಮರಗಳಿಂದ ಪರಿಸರ ಸುಂದರವಾಗಿದ್ದರೆ, ಎಲ್ಲ ಜೀವರಾಶಿಗಳು ಉಳಿಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ತಲಾ ಒಂದಾದರೂ ಸಸಿ ನೆಟ್ಟು ಪೋಷಿಸಲು ಮುಂದಾಗಿ ಎಂದರು.
ರಾಜ್ಯದ ಸಿಎಂ ಸಿದ್ದರಾಮಯ್ಯ ಅನೇಕ ಯೋಜನೆ ಜಾರಿಗೆ ತಂದಿದ್ದಾರೆ. ಗಿಡ-ಮರಗಳ ಉಳಿವಿಗಾಗಿ ಖರ್ಚು ಮಾಡುತ್ತಿರುವ ಹಣ ವ್ಯರ್ಥವಾಗಬಾರದು. ಸಾಮಾಜಿಕ ಕಾಳಜಿ ಮೈಗೂಡಿಸಿಕೊಂಡು ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಪರಿಸರ ಕಾರ್ಯಕರ್ತ ಉಮೇಶ್ ಮಾತನಾಡಿ, ಶ್ರೀಗಳ ದೀಕ್ಷಾ ರಜತೋತ್ಸವದ ವೇಳೆ ಸಸ್ಯೋತ್ಸವ ಆಯೋಜಿಸಿ ಪರಿಸರ ಪ್ರೇಮ ಮೆರೆದಿರುವುದು ಪುಣ್ಯದ ಕೆಲಸವಾಗಿದೆ. ಅಲ್ಲದೆ, ರಾಜ್ಯಾದ್ಯಂತ ಸಸಿ ನೆಡುವ ಕಾರ್ಯಕ್ರಮಕ್ಕೆ ಮುಂದಾಗಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಜನ್ಮದಿನವನ್ನು ಸಾಮಾನ್ಯವಾಗಿ ಬಹುತೇಕರೂ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಾರೆ. ಹೀಗಿರುವಾಗ ಸ್ವಾಮೀಜಿ ಪರಿಸರ ರಕ್ಷಣೆಗೆ ಒತ್ತು ನೀಡುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ನಿರಂಜನಾನಂದಪುರಿ ಶ್ರೀ, ಶಾಂತವೀರ ಶ್ರೀ, ಬಸವ ಜಯ ಮೃತ್ಯುಂಜಯ ಶ್ರೀ, ಪ್ರಸನ್ನಾನಂದ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಪುರುಷೋತ್ತಮಾನಂದಪುರಿ ಶ್ರೀ, ವಚನಾನಂದ ಶ್ರೀ, ಶ್ರೀಕೃಷ್ಣ ಯಾದವಾನಂದ ಶ್ರೀ, ಬಸವ ಮಾಚಿದೇವ ಶ್ರೀ, ಶಾಂತಭೀಷ್ಮ ಅಂಬಿಗರ ಚೌಡಯ್ಯ ಶ್ರೀ, ಹಡಪದ ಅಪ್ಪಣ್ಣ ಶ್ರೀ, ಕುಂಬಾರ ಗುಂಡಯ್ಯ ಶ್ರೀ, ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀ, ಈಶ್ವರಾನಂದಪುರಿ ಶ್ರೀ, ಸಿದ್ದರಾಮಯ್ಯನಂದಪುರಿ ಶ್ರೀ, ಶಿವಬಸವ ಶ್ರೀ, ಬಸವ ಪ್ರಸಾದ ಶ್ರೀ, ಮಹಾಲಿಂಗ ಶ್ರೀ, ನಾಗೇಂದ್ರ ಶ್ರೀ, ಬಸವಪ್ರಭು ಶ್ರೀ, ಮರುಳಸಿದ್ದ ಶ್ರೀ, ಶ್ರೀ ಬಸವ ನವಲಿಂಗ ಶರಣರು, ಶಾಂತ ಮಲ್ಲಿಕಾರ್ಜುನ ಶ್ರೀ, ಶಾಂತಲಿಂಗ ಶ್ರೀ, ಜಯದೇವ ಶ್ರೀ, ಬಸವ ರಮಾನಂದ ಶ್ರೀ, ಚನ್ನಬಸವ ಶ್ರೀ, ಬಸವಲಿಂಗಮೂರ್ತಿ ಶ್ರೀ, ಮಹಾಂತ ಶ್ರೀ, ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ, ಶಶಿಶೇಖರ ಸಿದ್ದಬಸವ ಶ್ರೀ, ಮಾತೆ ಸತ್ಯಕ್ಕ, ಮಾತೆ ನೀಲಲೋಚನಾ, ಮಾತೆ ಚಿನ್ಮಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಮುಖಂಡ ನೇರ್ಲಗುಂಟೆ ರಾಮಪ್ಪ ಇತರರಿದ್ದರು.
ವಧು-ವರರ ಸಮಾವೇಶ ಇಂದು: ಜು. 19ರಂದು ಗುರುಪೀಠದಲ್ಲಿ ವಧು-ವರರ ಉಚಿತ ಸಮಾವೇಶ ಆಯೋಜಿಸಲಾಗಿದೆ. ಒಂದು ಸಾವಿರ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. 20ರಂದು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಶಿವರಾಜ್ ಎಸ್.ತಂಗಡಗಿ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.