ತರೀಕೆರೆ: ಯೋಗ, ಪ್ರಾಣಾಯಾಮ ದೇಹವನ್ನು ಸದೃಢಗೊಳಿಸಿದರೆ ಪೂಜೆ, ಪ್ರಾರ್ಥನೆ, ಸತ್ಸಂಗಗಳು ಮನಸ್ಸು ಗಟ್ಟಿಗೊಳಿಸುತ್ತವೆ ಎಂದು ಶಿವಾನಂದ ಆಶ್ರಮದ ಶ್ರೀ ಚಿದಾನಂದಗಿರಿ ಸ್ವಾಮೀಜಿ ಹೇಳಿದರು.
ಅಜ್ಜಂಪುರ ಪಟ್ಟಣದ ಶೆಟ್ರು ಸಿದ್ದಪ್ಪ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಶಿವಮೊಗ್ಗ ಯೋಗ ವಿಸ್ಮಯ ಟ್ರಸ್ಟ್, ವಿಸ್ಮಯ ಸೌಹಾದ ಸಂಘರ್ದ ಸಹಯೋಗದಲ್ಲಿ ಭಾನುವಾರ ಡಾ. ಅನಂತ ಗುರೂಜಿ ನೇತೃತ್ವದಲ್ಲಿ ಆಯೋಜಿಸಿದ್ದ ಉಚಿತ ಬೃಹತ್ ಯೋಗ ಶಿಬಿರಕ್ಕೆ ಚಾಲನೆ ನೀಡಿ ಆರ್ಶೀವಚನ ನೀಡಿದರು.
ಆಧುನಿಕ ಬದುಕಿನಲ್ಲಿ ಒತ್ತಡ ಸಹಜ. ಇದರ ನಿವಾರಣೆಗೆ ಯೋಗಾಭ್ಯಾಸ ಅವಶ್ಯಕ. ಪ್ರತಿದಿನ ಒಂದಿಷ್ಟು ಸಮಯವನ್ನು ಯೋಗ, ಧ್ಯಾನ, ಪೂಜೆಗೆ ಮೀಸಲಿಡಬೇಕು. ಇಂತಹ ಶಿಬಿರಗಳನ್ನು ಪ್ರತಿ ತಾಲೂಕು, ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸಿದರೆ ಜನಸಾಮಾನ್ಯರಿಗೆ ಉಪಯುಕ್ತವಾಗಲಿದೆ ಎಂದರು.
ಜಿಪಂ ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿ ಮನೆ, ಮನೆಗಳಲ್ಲೂ ವಿವಿಧ ರೋಗದಿಂದ ಹೊರತಾದ ಜನರಿಲ್ಲದಂತಾಗಿದೆ. ಕಾಯಿಲೆಮುಕ್ತ ಜೀವನಕ್ಕೆ ಯೋಗಾ, ಪ್ರಾಣಾಯಾಮ, ವಾಯು ವಿಹಾರ ನಡೆಸುವುದು ಒಳ್ಳೆಯದು ಎಂದು ಹೇಳಿದರು.
ಯೋಗಗುರು ಡಾ. ಅನಂತ್ ಗುರೂಜಿ ಮಾತನಾಡಿ, ಬಹುದಿನಗಳ ಒತ್ತಾಸೆಯಂತೆ ಅಜ್ಜಂಪುರದಲ್ಲಿ ಯೋಗ ಶಿಬಿರ ಆಯೋಜಿಸಲಾಗಿದೆ. 8 ದಿನಗಳ ಕಾಲ ನಡೆಯುವ ಉಚಿತ ಶಿಬಿರದಲ್ಲಿ ರುಚಿಕರ ಕಷಾಯ ಮತ್ತು ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಶಿಬಿರದಲ್ಲಿ ಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳ ಜನ ಭಾಗವಹಿಸಿ ಯೋಗಾಭ್ಯಾಸ ನಡೆಸಬೇಕು. ಈ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಂ.ಭದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಗಿರೀಶ್ ಚವ್ಹಾಣ್, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಪುಟ್ಟಸ್ವಾಮಿ, ಪ್ರಮುಖರಾದ ಶಿವಾನಂದ್, ಪಿ.ಉಮೇಶ್ ಇತರರಿದ್ದರು.