ನ್ಯೂಸ್

ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಅಜಿತ್ ಭಾರತಿ ಎಂಬ ಯೂಟ್ಯೂಬರ್ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಅಜಿತ್ ಭಾರತಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಡಿಯೊ ಹರಿಬಿಟ್ಟಿದ್ದರು. ಈ ಸಂಬಂಧ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ.ಬೋಪಣ್ಣ ಅವರು ನೀಡಿದ ದೂರು ಆಧರಿಸಿ ಅಜಿತ್ ಭಾರತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ ಮಂದಿರದ ವಿಚಾರವಾಗಿ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಅಜಿತ್ ಭಾರತಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿರುವುದಾಗಿ ಅಜಿತ್ ಭಾರತಿ ಸುಳ್ಳು ವಿಡಿಯೋ ಹಂಚಿಕೊಳ್ಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಆದರೆ, ರಾಹುಲ್ ಗಾಂಧಿಯವರು ಭಾಷಣದಲ್ಲಿ ಆ ರೀತಿ ಹೇಳಿಲ್ಲ. ಜನರಲ್ಲಿ ವಿಭಜನೆಯ ಭಾವ ಉಂಟು ಮಾಡಲು ಮತ್ತು ಕೋಮು ದ್ವೇಷ ಹರಡಲು ಸ್ವಯಂ ಘೋಷಿತ ಪತ್ರಕರ್ತ, ಲೇಖಕ ಅಜಿತ್ ಭಾರತಿ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಹೀಗಾಗಿ, ಅಜಿತ್ ಭಾರತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೋಪಣ್ಣ ದೂರಿನಲ್ಲಿ ಮನವಿ ಮಾಡಿದ್ದರು.