ಮಾರಿಯುಪೋಲ್: ಯೂಕ್ರೇನ್ ಮೇಲಿನ ಆಕ್ರಮಣವನ್ನು ರಷ್ಯಾ ತೀವ್ರಗೊಳಿಸಿ ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡುತ್ತಿರುವುದರಿಂದ ನೂರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪಶ್ಚಿಮ ಯೂಕ್ರೇನ್ನ ಮಿಲಿಟರಿ ತರಬೇತಿ ನೆಲೆ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 19 ಜನರು ಮೃತಪಟ್ಟು 57 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ದಾಳಿಯೊಂದಿಗೆ ಸಮರವು ಪೋಲೆಂಡ್ ಗಡಿಯ ಸಮೀಪ ತಲುಪಿದೆ. ಲಿವ್ ನಗರದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಯಾವೊರಿವ್ ಮಿಲಿಟರಿ ರೇಂಜ್ ಮೇಲೆ ರಷ್ಯಾ ಪಡೆಗಳು 30 ಕ್ಷಿಪಣಿಗಳಿಂದ ದಾಳಿ ಮಾಡಿವೆ ಎಂದು ಲಿವ್ ಪ್ರಾಂತ್ಯದ ರಾಜ್ಯಪಾಲ ಮಾಕ್ಸಿಂ ಕೊಜಿಟ್ಸ್ಕಿ ಹೇಳಿದ್ದಾರೆ. ಲಿವ್ ಪಟ್ಟಣ ಯೂಕ್ರೇನ್-ಪೋಲೆಂಡ್ ಗಡಿಯಿಂದ ಕೇವಲ 35 ಕಿಲೋ ಮೀಟರ್ ದೂರದಲ್ಲಿದೆ.
ಅಮೆರಿಕದ ತರಬೇತುದಾರರು: ಅಂತಾರಾಷ್ಟ್ರೀಯ ಶಾಂತಿಪಾಲನೆ ಮತ್ತು ಭದ್ರತಾ ಕೇಂದ್ರ ಎಂದೂ ಕರೆಯಲಾಗುವ ಮಿಲಿಟರಿ ರೇಂಜ್ಗೆ ಅಮೆರಿಕ ಮತ್ತು ನ್ಯಾಟೋ ಕೂಟದ ದೇಶಗಳು ಯೂಕ್ರೇನ್ ಯೋಧರಿಗೆ ತರಬೇತಿ ನೀಡಲು ಮಿಲಿಟರಿ ತರಬೇತುದಾರರನ್ನು ನಿಯಮಿತವಾಗಿ ಕಳಿಸುತ್ತವೆ. ಇವಾನೋಫ್ರಾನ್ಕಿವ್ಸ್ನ ಏರ್ಪೋರ್ಟ್ ಮೇಲೆಯೂ ರಷ್ಯಾ ಕ್ಷಿಪಣಿ ಉಡಾಯಿಸಿದೆ. ಗಾಬರಿ ಹಾಗೂ ಭೀತಿ ಹುಟ್ಟಿಸುವುದು ರಷ್ಯಾದ ಉದ್ದೇಶವಾಗಿದೆ ಎಂದು ನಗರದ ಮೇಯರ್ ರುಸ್ಲಾನ್ ಮಾರ್ಟ್ಸಿಂಕಿವ್ ಹೇಳಿದ್ದಾರೆ.
ಅಧ್ಯಕ್ಷ ಝೆಲೆನ್ಸ್ಕಿ ಗುಡುಗು: ರಷ್ಯಾ ಪಡೆಗಳನ್ನು ಎದುರಿಸಲು ತಾನು ಸಿದ್ಧ ಎಂದು ಯೂಕ್ರೇನ್ ಘೋಷಿಸಿದೆ. ಯೂಕ್ರೇನ್ ವಿಭಜಿಸುವುದು ರಷ್ಯಾದ ಉದ್ದೇಶವಾಗಿದ್ದು ಮಾರಿಯುಪೋಲ್ನಿಂದ ಪಶ್ಚಿಮಕ್ಕಿರುವ ಮೆಲಿಟೊಪೋಲ್ ನಗರದ ಮೇಯರ್ನ್ನು ಬಂಧಿಸುವ ಮೂಲ ರಷ್ಯಾ ‘ಭಯೋತ್ಪಾದನೆಯ ಹೊಸ ಹಂತ’ ಆರಂಭಿಸಿದೆ ಎಂದು ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ. ‘ಈ ಪರೀಕ್ಷೆಯನ್ನು ಯೂಕ್ರೇನ್ ದೃಢವಾಗಿ ಎದುರಿಸಲಿದೆ. ನಮ್ಮ ನೆಲವನ್ನು ಪ್ರವೇಶಿಸಿರುವ ಯುದ್ಧ ಯಂತ್ರವನ್ನು ಮುರಿಯಲು ನಮಗೆ ಸಮಯ ಬೇಕು’ ಎಂದು ಶನಿವಾರ ರಾತ್ರಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಝೆಲೆನ್ಸ್ಕಿ ಗುಡುಗಿದ್ದಾರೆ. ಧೃತಿಗೆಡದೆ ಪ್ರತಿರೋಧ ಮುಂದುವರಿಸುವಂತೆ ಜನರಿಗೆ ಕರೆ ನೀಡಿದ್ದಾರೆ. ರಾಜಧಾನಿ ಕಿಯೆವ್ ವಶಪಡಿಸಿಕೊಳ್ಳುವ ರಷ್ಯಾದ ಉದ್ದೇಶಕ್ಕೆ ಸವಾಲು ಹಾಕಿರುವ ಝೆಲೆನ್ಸ್ಕಿ, ‘ರಷ್ಯನ್ನರು ನಮ್ಮ ಹೆಣಗಳ ಮೇಲಷ್ಟೇ ಕಿಯೆವ್ ಪ್ರವೇಶಿಸಬಹುದಾಗಿದೆ. ಅದು ಅವರ ಉದ್ದೇಶವಾಗಿದ್ದರೆ ಬರಲಿ ಬಿಡಿ’ ಎಂದು ಹೇಳಿದ್ದಾರೆ.
ರಕ್ಷಣಾ ಸ್ವಾವಲಂಬನೆಗೆ ಮೋದಿ ಕರೆ: ರಷ್ಯಾ-ಯೂಕ್ರೇನ್ ಯುದ್ಧ ಮುಂದುವರಿದಿರುವುದರ ನಡುವೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿ ದೇಶದ ಭದ್ರತಾ ಸನ್ನದ್ಧತೆಯನ್ನು ಪರಿಶೀಲಿಸಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿ ಮಾಡುವುದು ಅಗತ್ಯ ಎಂದವರು ಪ್ರತಿಪಾದಿಸಿದರು. ರಕ್ಷಣಾ ಸಚಿವ ರಾಜನಾಥ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್, ಮೂರೂ ಸೇನಾ ಪಡೆಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.
ನವೀನ್ ಶವ ತರಲು ಸೂಚನೆ: ಯೂಕ್ರೇನ್ನ ರ್ಖಾವ್ನಲ್ಲಿ ರಷ್ಯಾದ ಶೆಲ್ ದಾಳಿಗೆ ಬಲಿಯಾದ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ಪಾರ್ಥಿವ ಶರೀರವನ್ನು ದೇಶಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ನಡೆಸುವಂತೆ ಮೋದಿ ನಿರ್ದೇಶಿಸಿದರು.
ಅಮೆರಿಕ ಪತ್ರಕರ್ತನ ಹತ್ಯೆ: ಅಮೆರಿಕದ ಪತ್ರಕರ್ತರೊಬ್ಬರು ಕಿಯೆವ್ ಬಳಿ ರಷ್ಯಾ ಸೇನೆ ಹಾರಿಸಿದ ಗುಂಡಿಗೆ ಬಲಿಯಾಗಿದ್ದಾರೆ. ಇರ್ಪಿನ್ನ ಸೇತುವೆ ಬಳಿ ಕಾರೊಂದರ ಮೇಲೆ ಗುಂಡು ಹಾರಿಸಿದಾಗ ಅದರಲ್ಲಿದ್ದ ಪತ್ರಕರ್ತ ಬ್ರೆಂಟ್ ರಿನೌಡ್ (51) ಮೃತಪಟ್ಟರು.
1,500ಕ್ಕೂ ಹೆಚ್ಚು ಸಾವು: ಯುದ್ಧ ಆರಂಭವಾದಾಗಿನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಮಾರಿಯುಪೋಲ್ನಲ್ಲಿ 12 ದಿನಗಳಲ್ಲಿ 1,582 ನಾಗರಿಕರು ಬಲಿಯಾಗಿದ್ದಾರೆ. ರಷ್ಯನ್ನರ ಅಮಾನವೀಯ ವರ್ತನೆ ಎಷ್ಟರ ಮಟ್ಟಿಗಿದೆಯೆಂದರೆ ಹೆಣಗಳನ್ನು ಸಾಮೂಹಿಕವಾಗಿ ಹೂಳಲೂ ಅವಕಾಶವಾಗದಂತೆ ಶೆಲ್ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಮಾನವೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಸಾಮೂಹಿಕ ಸಮಾಧಿಗಳಲ್ಲಿ ಹೆಣಗಳನ್ನು ಹೂಳುವ ದೃಶ್ಯಗಳು ಮನಕಲಕುವಂತಿವೆ.