ಹುಣಸೂರು ತಾಲೂಕು ಯಶೋಧರಪುರದಲ್ಲಿ ಆಯೋಜಿಸಿದ್ದ ಎನ್ನೆಸ್ಸೆಸ್ಸ್ ಶಿಬಿರವನ್ನು ಕೆ.ಎಸ್.ಮುದಗಲ್ ಉದ್ಘಾಟಿಸಿದರು. ವಾಸು, ಜಿ.ಎಸ್.ಸಂಗ್ರೇಶಿ, ರುಚಿ ಬಿಂದಾಲ್, ಡಾ.ಎಸ್.ಯು.ಅಶೋಕ್, ಇಒ ಬಿ.ಕೆ.ಮನು ಇದ್ದರು.  
ನ್ಯೂಸ್

ಯುವಸಮೂಹ ದೇಶದ ಆಸ್ತಿಯಾಗಲಿ

ಹುಣಸೂರು: ಗುಣಮಟ್ಟದ ಶಿಕ್ಷಣ ನಿಡುವ ಮೂಲಕ ಸದೃಢ ಯುವಸಮೂಹವನ್ನು ದೇಶಕ್ಕೆ ಆಸ್ತಿಯನ್ನಾಗಿ ನೀಡಬೇಕಿದೆ ಎಂದು ಹೈಕೋರ್ಟ್ ನ್ಯಾಮೂರ್ತಿ ಕೆ.ಎಸ್.ಮುದಗಲ್ ಅಭಿಪ್ರಾಯಪಟ್ಟರು.

ಮೈಸೂರಿನ ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ, ವಿದ್ಯಾವರ್ಧಕ ಕಾನೂನು ಕಾಲೇಜು, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಿದ್ಯಾವಿಕಾಸ ಕಾನೂನು ಸೇವೆಗಳ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಯಶೋಧರಪುರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಎನ್ನೆಸ್ಸೆಸ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಜಿ ಸಚಿವೆ ಯಶೋಧರಮ್ಮ ದಾಸಪ್ಪ ಅವರ ಗ್ರಾಮದಲ್ಲಿ ಶಿಬಿರ ಆಯೋಜಿಸಿರುವುದು ಅರ್ಥಪೂರ್ಣ. ಯಶೋಧರಮ್ಮ ದಾಸಪ್ಪ ಸಚಿವರಾಗಿದ್ದಾಗ ಮದ್ಯ ನಿಷೇಧ ನೀತಿ ಹಿಂಪಡೆಯಲು ನಿರ್ಧರಿಸಿದ ಸರ್ಕಾರದ ನಿಲುವನ್ನು ಧಿಕ್ಕರಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದ ದಿಟ್ಟ ಮಹಿಳಾ ರಾಜಕಾರಣಿ ಎಂದರು.

ಮದ್ಯದಿಂದ ಸಂಗ್ರಹವಾಗುವ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಗೆ ಬಳಸುವುದರಿಂದ ಭೌತಿಕ ಅಭಿವೃದ್ಧಿ ಕಾಣಬಹುದೇ ಹೊರತು ಭೌದ್ಧಿಕವಾಗಿ ಅಲ್ಲ. ಅಲ್ಲದೆ ಮದ್ಯವ್ಯಸನಕ್ಕೆ ಪ್ರೋತ್ಸಾಹ ನೀಡುವುದರಿಂದ ತಳವರ್ಗದ ಕುಟುಂಬ ಬೀದಿಪಾಲಾಗಲಿವೆ ಎಂಬ ಧ್ವನಿ ಹಲವು ಬದಲಾವಣೆಗಳಿಗೆ ನಾಂದಿಯಾಗಿತ್ತು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಮಾತನಾಡಿದರು. ಮಾಜಿ ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಎಚ್.ವಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯ ಕಾರ್ಯದರ್ಶಿ ಸರೋಜಮ್ಮ ತುಳಸಿದಾಸ್, ಕಾನೂನು ವಿವಿ ಯೋಜನಾಧಿಕಾರಿ ಪ್ರೊ.ಬಿರದಾರ್, ಮಾಜಿ ಮೇಯರ್ ಪಿ.ವಿಶ್ವನಾಥ್, ನಿವೃತ್ತ ರಾಜ್ಯ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್, ಕೊತ್ತೆಗಾಲ ಗ್ರಾ.ಪಂ. ಅಧ್ಯಕ್ಷೆ ವಸಂತಾ, ಸದಸ್ಯೆ ಸುಭಾಷಿಣಿ, ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷ ಕೃಷ್ಣಯ್ಯ, ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಸೇರಿದಂತೆ ಇತರರಿದ್ದರು.