ರಾಣೆಬೆನ್ನೂರ: ಪ್ರೀತಿಸಿದ ಯುವತಿಯಿಂದ ಮೊಬೈಲ್ ಕಿತ್ತುಕೊಂಡು ಬರಲು ಯುವತಿಯರಿದ್ದ ಹಾಸ್ಟೆಲ್ ಗೆ ನುಗ್ಗಿದ ಮೂವರು ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.
ರಾಣೆಬೆನ್ನೂರ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವೃತ್ತಿಪರ ಕೋರ್ಸ್ ಗಳ ಯುವತಿಯರ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮಾರುತಿ ರಾಮಪ್ಪ ದೇವರ ಗುಡ್ಡ (೨೨), ನಾಗರಾಜ ಮಾಲತೇಶ ಬೆನ್ನೂರ (೨೦), ಮಾಲತೇಶ ಶಿವಪ್ಪ ವಾಲ್ಮೀಕಿ (೨೨) ಹಾಸ್ಟೆಲ್ ಗೆ ನುಗ್ಗಿದ ಆರೋಪಿಗಳು.
ಮಾರುತಿ ಎಂಬುವನು ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಆಕೆ ಹಾಸ್ಟೆಲ್ ನಲ್ಲಿದ್ದಾಗ ಏಕಾಏಕಿ ಹಾಸ್ಟೆಲ್ ಗೆ ನುಗ್ಗಿ ಆಕೆ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಬಂದಿದ್ದ. ಈತನ ಜೊತೆಗೆ ಸ್ನೇಹಿತರಾದ ಮಾಲತೇಶ, ನಾಗರಾಜ ಕೂಡ ಒಳಗೆ ನುಗ್ಗಿದ್ದರು. ಇದರಿಂದ ಹಾಸ್ಟೆಲ್ ನಲ್ಲಿದ್ದ ಯುವತಿಯರು ಭಯಭೀತರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಾರುತಿಯನ್ನು ಪ್ರೀತಿಸುತ್ತಿದ್ದ ಯುವತಿಯ ಮೂಲಕ ಆರೋಪಿಗಳನ್ನು ವಾಪಸ್ ಕರೆಯಿಸಿಕೊಂಡಿದ್ದಾರೆ. ಮೂವರ ವಿರುದ್ಧ ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಲಂ 448 ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲಿಗೆ ಅಟ್ಟಿದ್ದಾರೆ.