ಸಾಂದರ್ಭಿಕ ಚಿತ್ರ 
ನ್ಯೂಸ್

ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಚಾಲಕ ಅಮಾನತು

ಬೆಂಗಳೂರು: ಬಿಎಂಟಿಸಿ ಚಾಲಕನೊಬ್ಬ ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿರುವ ಘಟನೆ ಕಸ್ತೂರಬಾ ರಸ್ತೆಯ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಮೇ ೨೩ರ ಸಂಜೆ ೫.೪೦ಕ್ಕೆ ಈ ಘಟನೆ ನಡೆದಿತ್ತು.

ಬಸ್‌ನ ಹಿಂಬದಿಯಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿತ್ತು. ಇದರಿಂದಾಗಿ ಬಿಎಂಟಿಸಿ ಬಸ್ ಚಾಲಕ ಪ್ರಶಾಂತ್ ಮತ್ತು ಯುವತಿ ನಡುವೆ ಗಲಾಟೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದ ಯುವತಿ ಬಿಎಂಟಿಸಿ ಬಸ್ ಅನ್ನು ತಡೆದು ಚಾಲಕನನ್ನು ಪ್ರಶ್ನೆ ಮಾಡಲು ಮುಂದಾಗಿದ್ದಳು. ಆದರೆ, ಈ ವೇಳೆ ಚಾಲಕ ಯುವತಿಯ ಮೇಲೆ ಬಸ್ ಹತ್ತಿಸಲು ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಯುವತಿ ಪಾರಾಗಿದ್ದಾರೆ. ಸ್ವಲ್ಪ ಯಾಮಾರಿದ್ದರು ಯುವತಿಯ ಜೀವಕ್ಕೆ ಕುತ್ತು ಬರುತ್ತಿತ್ತು. ಚಾಲಕನ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇನ್ನು, ಯುವತಿಯ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಸ್ ಚಾಲಕ ಅಮಾನತು:

ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಯತ್ನಿಸಿದ್ದ ಚಾಲಕ ಪ್ರಶಾಂತ್ ಅವರನ್ನು ಅಮಾನತುಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಹಾಗೂ ಪ್ರಾಥಮಿಕ ಪರಿಶೀಲನೆಯ ವೇಳೆ ಬಸ್ ಅನ್ನು ಯುವತಿ ತಡೆದಿದ್ದರೂ ಚಾಲಕನು ಬಸ್ ಮುಂದಕ್ಕೆ ಚಲಾಯಿಸಲು ಯತ್ನಿಸಿರುವುದು ಕಂಡುಬಂದಿದೆ. ಇದರಿಂದ ಮಹಿಳೆಯು ತೀವ್ರ ಅಪಾಯಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಬದಿಗೆ ಸರಿದ ಕಾರಣದಿಂದ ಅಪಾಯ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.