ನ್ಯೂಸ್

ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಗಾಗಿ ತೀವ್ರ ಶೋಧ

ಬೆಂಗಳೂರು: ಮಾರತ್‌ಹಳ್ಳಿಯಲ್ಲಿ ಅನ್ಯ ರಾಜ್ಯದ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿರುವ ಆರೋಪಿಯ ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ.

ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಪರಿಶೀಲಿಸಿದ್ದು, ಆರೋಪಿಯು ನೇರಳೆ ಬಣ್ಣದ ಶರ್ಟ್ ಧರಿಸಿ ಬಂದಿದ್ದ ಸಂಗತಿ ಗೊತ್ತಾಗಿದೆ. ಆರೋಪಿಯ ಬೈಕ್‌ನ ನೋಂದಣಿ ಸಂಖ್ಯೆಯ ವಿವರ ಕಲೆಹಾಕಿರುವ ಪೊಲೀಸರು, ಇದರ ಜಾಡು ಹಿಡಿದು ಆತನ ಬೆನ್ನತ್ತಿದ್ದಾರೆ.

ಸಂತ್ರಸ್ತ ಯುವತಿಯು ಸ್‌ಟಾವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, ಏ.೩೦ರಂದು ರಾತ್ರಿ ೧೧.೪೦ ಕ್ಕೆ ಮಾರತ್‌ಹಳ್ಳಿಯ ಇಕೋ ವರ್ಲ್ಡ್ ಟೆಕ್‌ಪಾರ್ಕ್ ಗೇಟ್ ಬಳಿ ನಡೆದು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಬೈಕ್‌ನಲ್ಲಿ ಹಿಂಬಾಲಿಸಿ ಬಂದು ಬೆನ್ನಿನ ಕೆಳಭಾಗಕ್ಕೆ ಕೈನಿಂದ ಎರಡು ಬಾರಿ ಹೊಡೆದು ಅಸಭ್ಯವಾಗಿ ವರ್ತಿಸಿದ್ದ. ಈ ದುಷ್ಕೃತ್ಯವು ಘಟನಾ ಸ್ಥಳದ ಸಿ.ಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಆರೋಪಿಯ ಪತ್ತೆಗೆ ೩೦೦ಕ್ಕೂ ಹೆಚ್ಚು ಸಿ.ಸಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪರಿಶೀಲಿಸಲಾಗಿದೆ. ಆರೋಪಿಯ ಬೈಕ್‌ನ ನೋಂದಣಿ ಸಂಖ್ಯೆ ಸೇರಿದಂತೆ ಹಲವು ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಆತನನ್ನು ಬಂಧಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಯುವಿಹಾರಕ್ಕೆ ಹೋಗಿದ್ದಾಗ ಅಪರಿಚಿತ ವ್ಯಕ್ತಿಯು ಹಿಂಬಾಲಿಸಿಕೊಂಡು ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ. ನೇರಳೆ ಬಣ್ಣದ ಟಿ ಶರ್ಟ್ ಧರಿಸಿದ್ದ ಆ ವ್ಯಕ್ತಿಯು ಮೊದಲಿಗೆ ಹಿಂದಿನಿಂದ ಬಂದು ಬೆನ್ನಿನ ಕೆಳ ಭಾಗಕ್ಕೆ ಹೊಡೆದು ಸ್ವಲ್ಪ ಮುಂದೆ ಹೋಗಿ ಯೂ ಟರ್ನ್ ಮಾಡಿಕೊಂಡು ಮತ್ತೆ ಬಂದು ಅಸಭ್ಯವಾಗಿ ವರ್ತಿಸಿದ. ಈ ಹಿಂದೆ ಆತನನ್ನು ನೋಡಿಲ್ಲ ಎಂದು ಪ್ರಕರಣದ ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಅನಿರೀಕ್ಷಿತ ಘಟನೆಯಿಂದ ಆಘಾತಗೊಂಡ ತಾನು ಸಹಾಯಕ್ಕಾಗಿ ಕೂಗಿಕೊಂಡೆ. ಆಗ ಆ ವ್ಯಕ್ತಿ ಪರಾರಿಯಾದ. ಘಟನೆ ವೇಳೆ ಸಮೀಪದಲ್ಲೇ ನಡೆದು ಹೋಗುತ್ತಿದ್ದ ವ್ಯಕ್ತಿಗಳು ನೆರವಿಗೆ ಬರಲಿಲ್ಲ. ಸಾರ್ವಜನಿಕವಾಗಿ ತನ್ನ ಜತೆ ಅಸಭ್ಯವಾಗಿ ವರ್ತಿಸಿ, ಘನತೆಗೆ ಧಕ್ಕೆ ತಂದಿರುವ ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂತ್ರಸ್ತೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.