ಹೊಸನಗರ: ಸುಶಿಕ್ಷಿತ ಜನರೇ ಇಂದು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವುದು ಆತಂಕದ ಸಂಗತಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಕಾರಣಗಿರಿ ಸರ್ಕಾರಿ ಪ್ರೌಢಶಾಲೆಗೆ ವಿವೇಕ ಶಾಲಾ ಯೋಜನೆ ಹಾಗೂ ರಾಜ್ಯ ವಲಯ ಯೋಜನೆಯಡಿ 54 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ಮೂರು ನೂತನ ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಬೇಕಿದೆ. ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರು, ಹಲವು ದೇಶಪ್ರೇಮಿಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಯುವಸಮೂಹ ಮಾದಕ ವಸ್ತುಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆಯೂ ಆಗಬೇಕಿದೆ ಎಂದರು.
ಈ ಹಿಂದೆ ನಾನು ರಾಜ್ಯ ಗೃಹ ಖಾತೆ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ನಡೆದ ಸುಮಾರು 450 ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿತ್ತು. ಉತ್ತರ ಕರ್ನಾಟಕದ ಹಲವು ಮಂದಿ ಈ ಇದರಲ್ಲಿ ಭಾಗಿಯಾಗಿದ್ದು ಸೂಕ್ತ ತನಿಖೆಗಾಗಿ ನಾನು ನೇಮಿಸಿದ ಪೊಲೀಸ್ ಎಸ್‌ಐಟಿ ತಂಡವು ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಹಕಾರ ನೀಡಿದ್ದ ಓರ್ವ ಐಪಿಎಸ್ ಅಧಿಕಾರಿ ಸೇರಿದಂತೆ ಪ್ರಕರಣದಲ್ಲಿ ಶಾಮೀಲಾಗಿದ್ದ ಸುಮಾರು 106 ಆರೋಪಿಗಳ ಹೆಡೆಮುರಿ ಕಟ್ಟಿತ್ತು. ಇದರಿಂದ ಆಡಳಿತದಲ್ಲಿನ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಯಿತು ಎಂದರು.
ಬಿಇಒ ಎಚ್.ಆರ್. ಕೃಷ್ಣಮೂರ್ತಿ ಮಾತನಾಡಿ, ಬಿಸಿಯೂಟ, ಮೊಟ್ಟೆ, ಸಮವಸ್ತ್ರ ಸೇರಿ ಹಲವಾರು ಉಚಿತ ಯೋಜನೆಗಳಿಂದ ಗ್ರಾಮೀಣ ಭಾಗದ ಮಕ್ಕಳೂ ರಾಷ್ಟ್ರಮಟ್ಟದ ಎಲ್ಲ ವಿಭಾಗಗಳಲ್ಲಿ ಪೈಪೋಟಿ ನೀಡಲು ಸಹಕಾರಿ ಆಗಿದೆ ಎಂದರು.
ನಿವೃತ್ತ ಶಿಕ್ಷಕ ತಿರುಪತಿ ನಾಯ್ಕ ಮತ್ತಿತರರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಎನ್.ಎಸ್.ಶ್ರೀಧರ್, ರಾಮಚಂದ್ರಾಪುರ ಗ್ರಾಪಂ ಅಧ್ಯಕ್ಷ ವಿ.ಎನ್.ಸುಬ್ರಹ್ಮಣ್ಯ, ಉಪಾಧ್ಯಕ್ಷೆ ರುಕ್ಮಿಣಿ, ಸದಸ್ಯರಾದ ಗುರುಮೂರ್ತಿ, ರತ್ನಮ್ಮ, ಆದಿಲ್, ಪಾರ್ವತಿ, ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ತಹಸೀಲ್ದಾರ್ ರಶ್ಮಿ, ಶಿಕ್ಷಕ ಪುಟ್ಟಪ್ಪ, ರೇಣುಕೇಶ್, ಕರಿಬಸಪ್ಪ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ಎಸ್‌ಡಿಎಂಸಿ ಸದಸ್ಯರಾದ ಗಂಗಾಧರ್, ರಾಜೇಶ್, ಜಗನ್ನಾಥ, ಮಂಜುನಾಥ್ ಇತರರಿದ್ದರು.