ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಗ್ರಾಮದೇವತೆ ಮಾಲರಸಮ್ಮ ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. 
ನ್ಯೂಸ್

ಯುವಕರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ

ನಂಜನಗೂಡು: ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕ, ದೈಹಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕುಂಬ್ರಳ್ಳಿ ಸುಬ್ಬಣ್ಣ ತಿಳಿಸಿದರು.


ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಗ್ರಾಮದೇವತೆ ಮಾಲರಸಮ್ಮ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಹಿಂದೆ ಹಳ್ಳಿಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಸುಗ್ಗಿಯ ನಂತರದ ಊರ ಹಬ್ಬಗಳಲ್ಲಿ ಆಯೋಜಿಸುತ್ತಿದ್ದರು. ಇತ್ತೀಚೆಗೆ ಯುವಕರು ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳತ್ತ ಗಮನಹರಿಸಿರುವುದರಿಂದ ಗ್ರಾಮೀಣ ಕ್ರೀಡೆಗಳು ಕಡೆಗಣಿಸಲ್ಪಡುತ್ತಿವೆ ಎಂದರು.


ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಹೆಮ್ಮರಗಾಲ ಸೋಮಣ್ಣ ಮಾತನಾಡಿ, ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಬ್ಬಗಳ ಆಚರಣೆ ವೇಳೆ ಇಂತಹ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ಉತ್ತಮ ಕೆಲಸ ಎಂದರು. ಉದ್ಘಾಟನಾ ಪಂದ್ಯದಲ್ಲಿ ಹೆಮ್ಮರಗಾಲ ಎ ತಂಡವನ್ನು ಕೃಷ್ಣಾಪುರ ತಂಡ 10-15 ಅಂಕಗಳ ಅಂತರದಿಂದ ಪರಾಭವಗೊಳಿಸಿತು. ತಾಲೂಕು ಬಿಜೆಪಿ ಅಧ್ಯಕ್ಷ ಹೊರಳವಾಡಿ ಮಹೇಶ್, ತಾಪಂ ಮಾಜಿ ಸದಸ್ಯ ಶಿವಣ್ಣ, ಗ್ರಾಪಂ ಸದಸ್ಯರಾದ ರವಿಕುಮಾರ್, ರಘು,ನಾಗರಾಜು, ಕರಿಯಪ್ಪ, ಮಹದೇವು, ಮುಖಂಡರಾದ ಮಹೇಂದ್ರ, ಮಾದಶೆಟ್ಟಿ, ರಾಜು, ಶಿವಯ್ಯ ಶೆಟ್ಟಿ, ಸ್ವಾಮಿ, ಶಿವಮಲ್ಲು ಇದ್ದರು.