ಎನ್.ಆರ್.ಪುರ: ಏಡ್ಸ್‌ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಪಣ ತೊಡಬೇಕು ಎಂದು ಸರ್ಕಾರಿ ಆಸ್ಪತ್ರೆ ಡಾ. ಆಕರ್ಷ್ ತಿಳಿಸಿದರು.
ಮೆಣಸೂರು ಕಾರ್ಮೆಲ್ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಏಡ್ಸ್ ಚಿಕಿತ್ಸೆ ಇಲ್ಲದ ಮಾರಣಾಂತಿಕ ಕಾಯಿಲೆ. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವಷರ್ 1988ರಿಂದ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಯುವಕರು ದುಶ್ಚಟದಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಪ್ರಾತ್ಯಕ್ಷಿಕೆ ಮೂಲಕ ಏಡ್ಸ್ ಕಾಯಿಲೆ ಕುರಿತು ಮಾಹಿತಿ ನೀಡಿ, ಏಡ್ಸ್‌ಗೆ ಯಾವುದೇ ರೀತಿಯ ಲಸಿಕೆ, ಚಿಕಿತ್ಸೆ ಇರುವುದಿಲ್ಲ. ಕೇವಲ ಆರೋಗ್ಯ ಶಿಕ್ಷಣದ ಮೂಲಕ ಮಾತ್ರ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು ಎಂದರು.ವಕೀಲರ ಸಂಘದ ಕಾರ್ಯದರ್ಶಿ ಎಂ.ಆರ್.ಶಿವಪ್ರಸಾದ್, ವಕೀಲ ದೇವೇಂದ್ರ, ಕಾರ್ಮೆಲ್ ಕಾಲೇಜಿನ ಪ್ರಾಚಾರ್ಯೆ ಸಿಸ್ಟರ್ ಪುಷ್ಪಾ, ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ ಡೈಸಿ ಪ್ರತಿಜ್ಞಾವಿಧಿ ಬೋಧಿಸಿದರು.
ಆಪ್ತ ಸಮಾಲೋಚಕಿ ಸುಜಾತಾ, ಸಮುದಾಯ ಆರೋಗ್ಯಾಧಿಕಾರಿ ಶಿಲ್ಪಾ, ಪೂರ್ಣಮತಿ, ನಮಿತಾ, ಸುಪ್ರೀತಾ, ಸುಹಾಸ್, ಗಾಯತ್ರಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಇದ್ದರು.