ವಿಜಯವಾಣಿ ಸುದ್ದಿಜಾಲ ಕೋಲಾರ
ಮುಂದಿನ ತಲೆಮಾರನ್ನು ಮುನ್ನಡಸಲಿಕ್ಕೆ ಬೇಕಾದಂತಹ ನಾಯಕರನ್ನು ತಯಾರಿಸುವ ಅನಿವಾರ್ಯತೆ ಇದೆ. ಸರಿಯಾದ ಶಿಕ್ಷಣ ಕೊಟ್ಟು ಸಂವಿಧಾನ ಆಶಯಗಳನ್ನು ಯುವಕರಿಗೆ ನೀಡಿ, ಮುಂದಿನ ಭಾರತವನ್ನು ಸದೃಢಗೊಳಿಸಲು ಸಂವಿಧಾನ ಅಧ್ಯಯನ ಶಿಬಿರ ನೆರವಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ತಿಳಿಸಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ೨ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಓದು ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂವಿಧಾನದ ಜೊತೆಗೆ ವೈಜ್ಞಾನಿಕ ಮನೋಧರ್ಮವನ್ನು ವೃದ್ದಿಗೊಳಿಸುವ ಸಾಹಿತ್ಯ ಕೃತಿಗಳನ್ನು ಉಚಿತವಾಗಿ ಯುವಕರಿಗೆ ನೀಡಿ, ಓದಲು ಪ್ರೇರೇಪಿಸುವ ಕೆಲಸ ಅಧ್ಯಯನ ಶಿಬಿರ ಮಾಡಲಾಗುತ್ತಿದೆ. ಭಾರತ ದೇಶವನ್ನು ಸದೃಢಗೊಳಿಸಲು ಸಂವಿಧಾನ ಓದು ಅಗತ್ಯವಿದೆ ಎಂದರು.
ನಾಯಕರಿಗೆ ಭಾಷಣ ಕಲೆಯ ಕೌಶಲ್ಯಗಳನ್ನು ವೃದ್ಧಿಸಲು ಈ ರೀತಿಯ ಕಲಿಕಾ ಶಿಬಿರಗಳು ನೆರವಾಗುತ್ತವೆ. ಈ ಶಿಬಿರದಲ್ಲಿ ಭಾಗಿಯಾಗಿರುವ ಸಂಪನ್ಮೂಲ ವ್ಯಕ್ತಿಗಳನ್ನು ನೋಡಿಯೂ ಕಲಿಯಬಹುದಾಗಿದೆ ಎಂದರು.
ಗಮನ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಶಾಂತಮ್ಮ ಮಾತನಾಡಿ, ಮಹಿಳೆಯರು ಇಂದಿಗೂ ದಲಿತರಿಗಿಂತ ಕೀಳಾದ ಸ್ಥಾನದಲ್ಲಿ ಇದ್ದಾರೆ. ಎಲ್ಲಾ ವರ್ಗದ ಮಹಿಳೆಯರು ದ್ವಿತೀಯ ದರ್ಜೆಯ ಮಹಿಳೆಯಂತಿದ್ದಾರೆ. ಹೆಜ್ಜೆ ಹೆಜ್ಜೆಗೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಅದನ್ನು ತಡೆಯಲು ಸ್ತಿçÃಯರಿಗೂ ಸಂವಿಧಾನ ತಿಳುವಳಿಕೆ ಅತ್ಯಗತ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಸಂವಿಧಾನದ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿರುವ ಈ ಸಂದರ್ಭಧಲ್ಲಿ ಸಂವಿಧಾನವನ್ನು ಉಳಿಸಿಕೊಳ್ಳಲು ಸಂವಿಧಾನ ಅಧ್ಯಯನ ಅಗತ್ಯ. ಎಲ್ಲಾ ಜಿಲ್ಲೆಗಳಲ್ಲಿಯೂ ಈ ಬಗೆಯ ಅಧ್ಯಯನ ಶಿಬಿರಗಳು ನಡೆಯಬೇಕು ಎಂದರು.
ದಲಿತ ಹಿರಿಯ ಮುಖಂಡ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ನಿವೃತ್ತಿಯ ನಂತರವೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ನಿರಂತರವಾಗಿ ಸಂವಿಧಾನವನ್ನು ಯುವಕರಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಲ್ಲರೂ ಅವರ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದರು.
ಸಂವಿಧಾನ ಓದು ಮತ್ತು ಕುವೆಂಪು ವಿಚಾರಕ್ರಾಂತಿ ಎರಡು ಕೃತಿಗಳನ್ನು ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು.
ಸಮಾರೋಪಕ್ಕೂ ಮುನ್ನ ಎರಡು ಗೋಷ್ಠಿಗಳು ನಡೆದವು
ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಗೋಷ್ಠಿಯನ್ನು ಜಿ.ರಾಜಶೇಖರಮೂರ್ತಿ ನಡೆಸಿಕೊಟ್ಟರು.
ಸಂವಿಧಾನ ಜಾತ್ಯಾತೀತ ಗೋಷ್ಠಿಯನ್ನು ಆರ್.ರಾಮಕೃಷ್ಣ ರವರು ನಡೆಸಿಕೊಟ್ಟರು.
ನಿಕಟಪೂರ್ವ ಕಸಪ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್, ಲೇಖಕ ಗೋವಿಂದಪ್ಪ, ಬೆಳಕು ಸಂಸ್ಥೆಯ ರಾಧಾಮಣಿ, ದಲಿತ ಮುಖಂಡ ಹಬ್ಬಣಿ ಶಿವಪ್ಪ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೨೦ ಕೆ.ಎಲ್.ಆರ್ ೦೫ : ನಗರದ ಸುವರ್ಣ ಕನ್ನಡ ಭವನದಲ್ಲಿ ನಡೆದ ಸಂವಿಧಾನ ಓದು ಅಭಿಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ರವರು ಶಿಬಿರಾರ್ಥಿಗಳಿಗೆ ಸಂವಿಧಾನ ಓದು ಮತ್ತು ಕುವೆಂಪು ವಿಚಾರ ಕ್ರಾಂತಿ ಕೃತಿಗಳನ್ನು ವಿತರಿಸಿದರು. ದಲಿತ ಹಿರಿಯ ಮುಖಂಡ ಪಂಡಿತ್ ಮುನಿವೆಂಕಟಪ್ಪ, ಕಸಪ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್, ಗಮನ ಸಂಸ್ಥೆಯ ಅಧ್ಯಕ್ಷೆ ಶಾಂತಮ್ಮ ಮುಂತಾದವರು ಇದ್ದರು.