ನ್ಯೂಸ್

ಯುವಕರಿಗೆ ಉದ್ಯೋಗ ಅವಕಾಶ

ನಂಜನಗೂಡು: ಮಾಜಿ ಸಂಸದ ದಿ. ಆರ್.ಧ್ರುವನಾರಾಯಣ ಅವರ 62ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ನಿರೀಕ್ಷೆಗೂ ಮೀರಿ ಆಗಮಿಸಿದ್ದ ಯುವಕರು, ಯುವತಿಯರು ವಿವಿಧ ಕಂಪನಿ ಹಾಗೂ ಕಾರ್ಖಾನೆಗಳಲ್ಲಿ ಉದ್ಯೋಗ ಪಡೆದುಕೊಂಡರು.


ನಗರದ ಜೆಎಸ್‌ಎಸ್ ಮಂಗಳ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಗುಂಡ್ಲುಪೇಟೆ ಎಚ್.ಎಂ.ಗಣೇಶ್ ಪ್ರಸಾದ್ ಚಾಲನೆ ನೀಡಿದರು. ಮೈಸೂರು, ಬೆಂಗಳೂರು, ನಂಜನಗೂಡು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿದ್ದ ವಿವಿಧ ಕಂಪನಿಗಳು, ಕಾರ್ಖಾನೆಗಳ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಉದ್ಯೋಗ ಆಕಾಂಕ್ಷಿಗಳ ಸಂದರ್ಶನ ನಡೆಸಿದರು. ವಿವಿಧ ಕಂಪನಿಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಹಲವರಿಗೆ ಮತ್ತೊಂದು ಸುತ್ತಿನ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳುವ ಕುರಿತು ಭರವಸೆ ನೀಡಲಾಯಿತು.


ನಂಜನಗೂಡು, ಎಚ್.ಡಿ.ಕೋಟೆ, ತಿ.ನರಸೀಪುರ, ಗುಂಡ್ಲುಪೇಟೆ, ಮೈಸೂರು ಸೇರಿದಂತೆ ನಾನಾ ಭಾಗಗಳಿಂದ ಯುವಕರು ಆಗಮಿಸಿದ್ದರು. ಯಾವ ಕಂಪನಿಗಳಲ್ಲಿ ಎಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ, ಆಯ್ಕೆ ಪ್ರಕ್ರಿಯೆ ಹೇಗೆ ಎಂಬ ಕುರಿತು ಶಾಸಕ ದರ್ಶನ್ ಧ್ರುವನಾರಾಯಣ ಮಾಹಿತಿ ಪಡೆದುಕೊಂಡರು. ಮೇಳಕ್ಕೆ ಆಗಮಿಸಿದ್ದವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಆರ್.ಧ್ರುವನಾರಾಯಣ ಪುತ್ರ ಧೀರನ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಎಂ.ಲತಾ ಸಿದ್ದಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ಯು.ಎನ್.ಪದ್ಮನಾಭರಾವ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್ ರಾಜ್, ಜಿಪಂ ಮಾಜಿ ಸದಸ್ಯ ಕೆ.ಮಾರುತಿ, ಕಾಂಗ್ರೆಸ್ ಮುಖಂಡರಾದ ಕೆರೆಹಳ್ಳಿ ನವೀನ್, ಹಗಿನವಾಳು ಬಸವಣ್ಣ, ಬದನವಾಳು ಸೋಮು, ಹುಂಡಿ ನಾಗರಾಜು ಹಾಜರಿದ್ದರು.

ಸ್ಥಳೀಯರಿಗೆ ಉದ್ಯೋಗ: ಯುವಜನತೆಗೆ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಸಿಗುವಂತಾದರೆ ದೇಶದ ಪ್ರಗತಿ ಸಾಧ್ಯ ಎಂಬುದನ್ನು ಮನಗಂಡಿದ್ದ ಆರ್.ಧ್ರುವನಾರಾಯಣ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದರು. ಅವರ ಇಚ್ಛೆಯಂತೆ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಬದುಕು ರೂಪಿಸಿಕೊಡುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಉದ್ಯೋಗ ಮೇಳ ಆಯೋಜಿಸುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.


ನಂಜನಗೂಡು ತಾಲೂಕಿನಲ್ಲೇ ಸಾಕಷ್ಟು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಸ್ಥಳೀಯವಾಗಿ ಉದ್ಯೋಗ ಸಮಸ್ಯೆ ಎದುರಾಗದಂತೆ ಉದ್ಯೋಗ ಕಲ್ಪಿಸಬೇಕೆಂಬ ಉದ್ದೇಶದಿಂದ ಅವರ ಹುಟ್ಟುಹಬ್ಬದ ನೆನಪಿನಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಯುವಕರಿಗೆ ಉದ್ಯೋಗ ಸಿಕ್ಕರೆ ಧ್ರುವನಾರಾಯಣ ಅವರ ಸ್ಮರಣೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.


ಹುಟ್ಟುಹಬ್ಬದ ದಿನವಾದ ಜು.31ರಂದು (ಸೋಮವಾರ) ನಂಜನಗೂಡಿನಲ್ಲಿ ರಕ್ತದಾನ ಶಿಬಿರ ಹಾಗೂ ಹುಲ್ಲಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.