ನ್ಯೂಸ್

ಯುವ ಪೀಳಿಗೆ ಪ್ರತಿಭಾವಂತರಾಗಿ ಹೊರ ಹೊಮ್ಮಬೇಕು: ಎಚ್.ಡಿ ರೇವಣ್ಣ

ಹೊಳೆನರಸಿಪುರ : ಯುವ ಪೀಳಿಗೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಭಾವಂತರಾಗಿ ಹೊರ ಹೊಮ್ಮಬೇಕು ಎಂದು ಮಾಜಿ ಸಚಿವ ಶಾಸಕ ಎಚ್ ಡಿ ರೇವಣ್ಣ ಹೇಳಿದರು.

ಪಟ್ಟಣದ ಗಣಪತಿ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘ ,ಜಿಲ್ಲಾ ಶಾಖೆ ಹಾಗೂ ತಾಲೂಕು ಶಾಖೆ  ಸಂಯುಕ್ತಾಶ್ರಯದಲ್ಲಿ 2021 22ನೇ ಸಾಲಿನ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಜ್ಯೋತಿ ಬೆಳಗಿಸುವ ಮೂಲಕ ಮಾತನಾಡಿದ ಅವರು ಸರ್ಕಾರಿ ನೌಕರರ ಕುಟುಂಬ ವರ್ಗದವರ ಹಿತ ಕಾಯುವುದು ಅತ್ಯವಶ್ಯಕ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವುದು ಸರ್ಕಾರಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು. ಸರ್ಕಾರಿ ನೌಕರರ ಪ್ರತಿಭಾವಂತ 400 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯವಾದದ್ದು ಎಂದರು. ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರ ಎಸ್ ಎಸ್ ಎಲ್ ಸಿ ಪಿಯುಸಿ ವಿದ್ಯಾರ್ಥಿಗಳಿಗೆ ನೌಕರರ ಸಂಘದ ವತಿಯಿಂದ ಅವರ ಪ್ರತಿಭೆಗೆ ಗೌರವ ನೀಡುತ್ತಿರುವುದು ಉತ್ತಮವಾಗಿದೆ ನೌಕರರ ಮಕ್ಕಳು ಇಂದಿನ ಸ್ಪರ್ಧಾತ್ಮಕ ವಿದ್ಯಾಮಾನಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ನಾಡಿನ ಸೇವೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ನಮ್ಮ ಅಧಿಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ತಾಲೂಕು ಜಿಲ್ಲಾ ವಾರು ಪದವಿಪೂರ್ವ ಪದವಿ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜುಗಳನ್ನ ಪ್ರಾರಂಭಮಾಡಿದವು. ನಮ್ಮ ಶ್ರಮದಿಂದ ಬಡ ಕುಟುಂಬದ ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಸರ್ಕಾರಿ ನೌಕರರಿಗೆ ನಮ್ಮ ಸಂಪೂರ್ಣ ಸಹಕಾರ ಬೆಂಬಲ ಸದಾ ಇರುತ್ತದೆ ಎಂದು ಇದೇ ಸಂದರ್ಭದಲ್ಲಿ ನುಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಮಾತನಾಡಿ ನಮ್ಮ ರಾಜ್ಯದಲ್ಲಿ ಆರು ಲಕ್ಷ ಸರ್ಕಾರಿ ನೌಕರರಿದ್ದು ಅವರ ಹಿತಕ್ಕಾಗಿ ಸಂಘ ಕೆಲಸ ಮಾಡುತ್ತಿದೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ನಮ್ಮ ನೌಕರರ ಮಕ್ಕಳ ಪ್ರತಿಭೆಗೆ ಗೌರವಿಸಿ ಪ್ರೇರೇಪಿಸುವುದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ ಮಕ್ಕಳು ಪ್ರತಿಭೆಯಲ್ಲಿ ಸದೃಢರಾಗಿದ್ದರೆ ಈ ನಾಡು ದೇಶ ಸದೃಢವಾಗುತ್ತದೆ ಎಂದು ನುಡಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಏಳನೇ ವೇತನ ಆಯೋಗ ರಚಿಸಿದ್ದು ಶೇಕಡ 40% ಬಗ್ಗೆ ಹೆಚ್ಚಿಸುವ ನಿರೀಕ್ಷೆಯಲ್ಲಿದ್ದೇವೆ ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಶೇಕಡ 22ರಷ್ಟು ಸಿದ್ದರಾಮಯ್ಯ ಶೇಕಡ 30ರಷ್ಟು ವೇತನ ಹೆಚ್ಚಿಸಿದ್ದನ್ನು ನಾವೆಲ್ಲ ನೆನಪಿಸಿಕೊಳ್ಳಬೇಕಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಯಾಗುವಂತೆ ಹೋರಾಟ ನಡೆಸಲಾಗುವುದು ಎಂದು  ತಿಳಿಸಿದರು.

ಜಿಲ್ಲಾ ಶಾಖೆ ಅಧ್ಯಕ್ಷ ಈ ಕೃಷ್ಣೆಗೌಡ ಮಾತನಾಡಿದರು. ವೇದಿಕೆಯಲ್ಲಿ ತಹಶೀಲ್ದಾರ್ ಕೆಕೆ ಕೃಷ್ಣಮೂರ್ತಿ  ತಾಲೂಕು ಪಂಚಾಯಿತಿ ಅಧಿಕಾರಿ ಗೋಪಾಲ್ , ಪ್ರಭಾರ ಬಿಇಓ ಭಾಗ್ಯಮ್ಮ ಪುರಸಭೆ ಅಧ್ಯಕ್ಷ ಜ್ಯೋತಿ ಮಂಜುನಾಥ್ ನೌಕರರ ಸಂಘ ನುದ ಉಪಾಧ್ಯಕ್ಷ ಶಿವರುದ್ರಪ್ಪ ತಾಲೂಕು ಶಾಖೆ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ತಾಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಉಪಸ್ಥಿತರಿದ್ದರು