ನ್ಯೂಸ್

ಯುವ ನಿಧಿ ಯೋಜನೆಗೆ ಡಿಸೆಂಬರ್ ೨೬ ರಿಂದ ನೋಂದಣಿ ಪ್ರಾರಂಭ/ ಅರ್ಹರು ನೋಂದಣಿ ಮಾಡಿಕೊಳ್ಳಿ/ ಜಿಲ್ಲಾಧಿಕಾರಿ ಅಕ್ರಂ ಪಾಷ

ವಿಜಯವಾಣಿ ಸುದ್ದಿಜಾಲ ಕೋಲಾರ
ಯುವ ನಿಧಿ ಯೋಜನೆಯ ಅರ್ಹ ಫಲಾನುಭವಿಗಳು ಇಂದಿನಿAದ ನೊಂದಣಿ ಮಾಡಿಕೊಂಡು ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯುವ ನಿಧಿ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಯೋಜನೆಗೆ ಫಲಾನುಭವಿಗಳಾಗತಕ್ಕವರು ೨೦೨೩ರಲ್ಲಿ ಪದವಿ, ಡಿಪ್ಲೋಮಾ ಮುಗಿಸಿರಬೇಕು. ಕನಿಷ್ಟ ೬ ತಿಂಗಳ ಕಾಲ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಹೊಂದಿಲ್ಲದವರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕೋಲಾರ ಜಿಲ್ಲೆಯಿಂದ ಯುವ ನಿಧಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವವರು ೨೦,೫೦೦ ಇದ್ದಾರೆ ಎಂದು ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.

ಪದವಿ ಮಾಡಿದವರಿಗೆ ಮಾಸಿಕ ರೂ.೩೦೦೦, ಡಿಪ್ಲೋಮಾ ಮಾಡಿದವರಿಗೆ ಮಾಸಿಕ ರೂ.೧೫೦೦ನ್ನು ನಿರುದ್ಯೋಗ ಭತ್ಯೆಯಾಗಿ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಉಚಿತವಾಗಿ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಹ ಅರ್ಜಿ ಸಲ್ಲಿಸಬಹುದು. ಹೆಲ್ಪ್ ಲೈನ್ ಸಂಖ್ಯೆ ೧೮೦೦೫೯೯೯೯೧೮ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ, ಪದವಿ ಪೂರ್ವ ಶಿಕ್ಪ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರಪ್ಪ, ಕೃಷಿ ಜಂಟಿ ನಿರ್ದೇಶಕಿ ಸುಮ, ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೨೬ ಕೆ.ಎಲ್.ಆರ್. ೦೭ : ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಅಕ್ರಂಪಾಷ, ಎಸ್.ಪಿ. ಎಂ.ನಾರಾಯಣ್, ಸಿ.ಇ.ಓ. ಪದ್ಮಬಸವಂತಪ್ಪ ಇದ್ದರು.