ನ್ಯೂಸ್

ಯುವ ಕಾಂಗ್ರೆಸ್‌ನಲ್ಲಿ ಚುನಾವಣೆ ಗಡಿಬಿಡಿ

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಗೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಆಕಾಂಕ್ಷಿಗಳು ಬಿರುಸಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಮೂರು ವರ್ಷದ ಅವಧಿಯ ಅಧ್ಯಕ್ಷ, ಪದಾಧಿಕಾರಿಗಳ ಅವಧಿ ಮುಗಿದಿದ್ದು ಹೊಸ ತಂಡ ರಚನೆಯಾಗಬೇಕಿದೆ. ಪಕ್ಷದ ಅಧ್ಯಕ್ಷರ ಶಿಫಾರಸಿನ ಆಧಾರದಲ್ಲಿ ವಿವಿಧ ಘಟಕಗಳಿಗೆ ನೇರ ನೇಮಕ ಮಾಡಿದಂತೆ ಯುವ ಕಾಂಗ್ರೆಸ್‌ಗೂ ಚುನಾವಣೆ ನಡೆಸುವ ಬದಲು ನೇಮಕ ಮಾಡುವುದೂ ಸೂಕ್ತವೆಂಬ ಅಭಿಪ್ರಾಯ ಹಿರಿಯ ಮುಖಂಡರಿಂದ ಬಂದಿತ್ತು. ಈ ನಡುವೆ ಸದಸ್ಯತ್ವ ನೋಂದಣಿ ಆರಂಭಿಸಿದ ಪಕ್ಷದ, ಚುನಾವಣೆ ಮುನ್ಸೂಚನೆ ನೀಡಿದೆ.

ಎಚ್.ಎಸ್.ಮಂಜುನಾಥ್, ಮಿಥುನ್ ರೈ, ರಕ್ಷಾ ರಾಮಯ್ಯ, ಕೆಂಪರಾಜ್, ವಿಶ್ವನಾಥ್, ನಳಪಾಡ್, ಶಿವಕುಮಾರ್ ಹೆಸರು ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯಾದ್ಯಂತ ಯಾರು ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳುತ್ತಾರೋ ಅವರಿಗೆ ಹೆಚ್ಚು ಅವಕಾಶ ಎಂಬ ಮಾತು ಪಕ್ಷದಲ್ಲಿದೆ. ಕಳೆದ ಬಾರಿ 4 ಲಕ್ಷ ಸದಸ್ಯತ್ವವಾಗಿದ್ದು, ಈ ಬಾರಿ ಆಕಾಂಕ್ಷಿಗಳ ನಡುವೆ ಪೈಪೋಟಿ ಇರುವುದರಿಂದ ಸದಸ್ಯತ್ವ ಸಂಖ್ಯೆ 5 ಲಕ್ಷ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದಸ್ಯತ್ವಕ್ಕೂ ಈ ಬಾರಿ ಮೊಬೈಲ್ ಅಪ್ಲಿಕೇಶನ್ ಬಳಸಲಾಗುತ್ತಿದೆ. ಶುಲ್ಕ ಪಾವತಿ, ದಾಖಲೆ ಆಪ್‌ಲೋಡ್ ಮಾಡಲು ಈ ಅಪ್ಲಿಕೇಷನ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲೇ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಒಟಿಪಿ ಆಧಾರದಲ್ಲಿ ಲಾಗಿನ್ ಆಗಿ ಮತದಾನ ಮಾಡಲು ವ್ಯವಸ್ಥೆ ಮಾಡುತ್ತಿದ್ದು, ಈ ಪ್ರಯತ್ನ ಎರಡು ರಾಜ್ಯಗಳಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲೂ ಆನ್‌ಲೈನ್‌ನಲ್ಲೇ ಚುನಾವಣೆ ನಡೆಸುವ ಆಲೋಚನೆ ಪಕ್ಷದ್ದು. ಒಂದೇ ಬಾರಿಗೆ ಸದಸ್ಯರು ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು ಮತದಾನ ಮಾಡುವ ಅವಕಾಶ ಮಾಡಿಕೊಡಲಾಗುತ್ತದೆ.