ಹಿಂದುಗಳ ಹೊಸ ವರ್ಷಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಹಬ್ಬ ಆಚರಣೆಗೆ ನಗರದ ಎಲ್ಲ ದೇವಸ್ಥಾನಗಳು, ಮನೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹಬ್ಬದ ದಿನ ಹಿಂದುಗಳು ಮೈಗೆ ಎಣ್ಣೆ (ತೈಲ)ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಸಂಪ್ರದಾಯದಂತೆ ಮನೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ ಮನೆ ಸದಸ್ಯರೆಲ್ಲ ಹೊಸ ಬಟ್ಟೆ ತೊಟ್ಟು ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶ ಸಾರುವ ‘ಬೇವು-ಬೆಲ್ಲ’ ಸವಿಯಲಿದ್ದಾರೆ. ಮಧ್ಯಾಹ್ನ ಹೋಳಿಗೆ, ಮಾವಿನ ಕಾಯಿ ಚಿತ್ರಾನ್ನ ಮಾಡಿ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿ ಸಂಭ್ರಮಿಸುವುದು ವಾಡಿಕೆ.
ಬೆಲೆ ಏರಿಕೆ ಬಿಸಿ: ನಗರದ ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ವೃತ್ತ, ಶಿವರಾಂಪೇಟೆ, ವಾಣಿವಿಲಾಸ, ಮಂಡಿ ಮಾರ್ಕೆಟ್, ಅಗ್ರಹಾರ ವೃತ್ತ, ನಂಜುಮಳಿಗೆ ವೃತ್ತ ಸೇರಿದಂತೆ ಪ್ರಮುಖ ಮಾರುಕಟ್ಟೆ, ವೃತ್ತಗಳಲ್ಲಿ ಹಬ್ಬಕ್ಕೆ ಬೇಕಿರುವ ಅಗತ್ಯ ವಸ್ತುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಹೊನ್ನೇರು, ದೇಗುಲಗಳಲ್ಲಿ ಪೂಜೆ ಸಲ್ಲಿಸಲು ಬೇಕಾದ ಸಾಮಗ್ರಿಗಳ ಖರೀದಿ ಜೋರಾಗಿತ್ತು.
ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಬ್ಬದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಶನಿವಾರ ಮಾರುಕಟ್ಟೆಯಲ್ಲಿ ಖರೀದಿ ಮಾತ್ರ ಜೋರಾಗಿಯೇ ನಡೆಯಿತು. ಹೂ, ಹಣ್ಣು ಇನ್ನಿತರ ವಸ್ತುಗಳ ಖರೀದಿ ಭರಾಟೆ ಕಂಡು ಬಂತು.
ಶನಿವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ದಾಂಗುಡಿಯಿಟ್ಟ ಗ್ರಾಹಕರು ಹೂ, ಹಣ್ಣು, ತರಕಾರಿ, ಬೇವು-ಬೆಲ್ಲ, ಹೊಸ ಬಟ್ಟೆ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ಮೈಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಬೇವಿನ ಸೊಪ್ಪು, ಮಾವಿನ ಸೊಪ್ಪು, ಹೂಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಮಾರಾಟ ಮಾಡುತ್ತಿದ್ದದು ಸಾಮಾನ್ಯವಾಗಿತ್ತು.
ನಗರದಲ್ಲಿ ಹೂವಿನ ಬೆಲೆ ದುಪ್ಪಟ್ಟಾಗಿತ್ತು. ಸಾಮಾನ್ಯ ದಿನಕ್ಕಿಂತ 30ರಿಂದ 50 ರೂ.ಗೆ ಏರಿಕೆಯಾಗಿದೆ. ಸೇವಂತಿಗೆ ಮಾರು 80-100 ರೂ., ಕನಕಾಂಬರದ ಗರಿಷ್ಠ ದರ ಪ್ರತಿ ಕೆ.ಜಿ.ಗೆ 1200 ರೂ., ಮಲ್ಲಿಗೆ ಕೆ.ಜಿ.ಗೆ 800 ರೂ., ಗುಲಾಬಿ ಕೆ.ಜಿ.ಗೆ 240 ರೂ., ಸುಗಂಧರಾಜ ಕೆ.ಜಿ.ಗೆ 160 ರೂ., ಚೆಂಡು ಹೂ ಕೆ.ಜಿ.ಗೆ 80-100 ರೂ.ಗೆ ಮಾರಾಟವಾಯಿತು. ಬಾಳೆ ಹಣ್ಣು ಕೆ.ಜಿ.ಗೆ 100ರೂ.ಗೆ ಮಾರಾಟವಾಯಿತು. ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿಯೂ ಏರಿಕೆಯಾಗಿತ್ತು.
ಮಾವಿನ ಎಲೆ ಕಟ್ಟು 10 ರಿಂದ 20 ರೂ., ಬೇವಿನ ಸೊಪ್ಪು ಕಟ್ಟು 20 ರೂ., ತುಳಸಿ ತೋರಣ ಒಂದು ಮಾರಿಗೆ 60 ರಿಂದ 80 ರೂ. ಇತ್ತು. ಬೆಲ್ಲದ ಅಚ್ಚು-ಉಂಡೆ ಕೆ.ಜಿ.ಗೆ 70 ರಿಂದ 80 ರೂ.ಗೆ ವಾರಾಟವಾಯಿತು. ಮಾವಿನ ಹಣ್ಣಿನ ದರ ಮಾತ್ರ ತುಸು ಇಳಿಕೆ ಕಂಡಿದ್ದು ವಿಶೇಷ.