ನ್ಯೂಸ್

ಯಾರೋ ಒಬ್ಬರಿಂದ ಇಡೀ ಸಮುದಾಯವೇ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ / ಜಿ. ಪಲ್ಲವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಯಾರೋ ಒಬ್ಬರು ಜಾತಿ ಪ್ರಮಾಣ ಪತ್ರವನ್ನು ದುರ್ಬಳಕೆ ಮಾಡಿಕೊಂಡ ಕಾರಣದಿಂದ ಇಡೀ ಚನ್ನದಾಸರ್ ಸಮುದಾಯವೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು ಯಾರಿಗೂ ಅನ್ಯಾಯವಾಗಬಾರದು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿ, ಯಾರೋ ಒಬ್ಬರು ಸಮುದಾಯದ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಪಡೆದುಕೊಂಡು ದುರ್ಬಳಕೆ ಮಾಡಿಕೊಂಡಿರುವ ಫಲವಾಗಿ ಇವತ್ತಿನ ದಿನಗಳಲ್ಲಿ ಇಡೀ ಚನ್ನದಾಸರ್ ಸಮುದಾಯದವರು ಶಿಕ್ಷಣ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲೆಮಾರಿ ಜನಾಂಗಕ್ಕೆ ಸೂಕ್ತ ನೆಲೆ ಇಲ್ಲ :

ಚನ್ನದಾಸರ್ ಜನಾಂಗಕ್ಕೆ ಸೂಕ್ತ ನೆಲೆ ಇಲ್ಲದ ಕಾರಣದಿಂದ ಒಂದು ಊರಿನಿಂದ ಮತ್ತೊಂದು ಊರಿಗೆ ಅಲೆಮಾರಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ನಲೆ ಇದ್ದರೆ ಶಿಕ್ಷಣ ಹಾಗೂ ಸೌಲಭ್ಯಗಳನ್ನು ಪಡೆದುಕೊಂಡು ಎಲ್ಲಾ ರಂಗದಲ್ಲೂ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.

ಪರಿಶೀಲಿಸಿ ಪ್ರಮಾಣ ಪತ್ರ ವಿತರಿಸಿ:

ಚನ್ನದಾಸರ್ ಜನಾಂಗದವರು ಜಾತಿ ಪ್ರಮಾಣ ಪತ್ರಕ್ಕೆ ಮನವಿ ಸಲ್ಲಿಸಿದಾಗ ಖುದ್ದಾಗಿ ತಾವು ಭೇಟಿ ನೀಡಿ ಅವರ ಜೀವನ ಶೈಲಿಯನ್ನು ಪರಿಶೀಲಿಸಿ ಜಾತಿ ಪ್ರಮಾಣ ಪತ್ರವನ್ನು ವಿತರಿಸುವ ಮೂಲಕ ಚನ್ನದಾಸರ್ ಜನಾಂಗದ ಮಕ್ಕಳು ಶಿಕ್ಷಣ ಪಡೆಯಲು ಸಹಕಾರಿಸಿ ಎಂದು ಎಲ್ಲಾ ತಹಸೀಲ್ದಾರ್ ಗಳಿಗೆ ಮನವಿ ಮಾಡಿದರು.

೫ ಸಾವಿರ ಮನೆಗಳು ವಾಪಸ್:

ರಾಜ್ಯ ಸರ್ಕಾರದಿಂದ ಅಲೆಮಾರಿ ಸಮುದಾಯಗಳಿಗೆ ಸೂರು ಕಲ್ಪಿಸುವ ದೃಷ್ಟಿಯಿಂದ ಸರ್ಕಾರದಿಂದ ಸುಮಾರು ೧೦ ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿತ್ತು. ಆದರೆ ಕೇವಲ ೫ ಸಾವಿರ ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಉಳಿದ ೫ ಸಾವಿರ ಮನೆಗಳನ್ನು ಸರ್ಕಾರ ವಾಪಸ್ ಪಡೆಯಲಾಯಿತು ಎಂದರು.

ಕಾಲು ಎಳೆಯುವ ಕೆಲಸ ಬೇಡ :

ನಮ್ಮ ಸಮುದಾಯದ ಒಬ್ಬ ಹೆಣ್ಣು ಮಗಳು ಮುಂದೆ ಬರುತ್ತಿದ್ದಾಳೆ ಎಂದರೆ ಪ್ರೋತ್ಸಾಹ ನೀಡುವ ಬದಲಾಗಿ ಕಾಲು ಎಳೆಯುವ ಕೆಲಸ ಮಾಡುತ್ತಾರೆ. ಅಂದರೆ ಯಾರು ಸಹ ಅಂತಹ ಕಾಲು ಎಳೆಯುವ ಕೆಲಸಕ್ಕೆ ಹೋಗಬೇಡಿ. ಯಾರಾದರೂ ಸಮುದಾಯದವರು ಯಾವುದೇ ಕ್ಷೇತ್ರದಲ್ಲಾಗಲಿ ಮುಂದೆ ಬರುತ್ತಿದ್ದರೆ ಸಹಕಾರ ನೀಡಿ ಬೆಳೆಸಿ ಪ್ರೋತ್ಸಾಹಿಸಿ ಎಂದರು.

ಅವಕಾಶ ಸಿಕ್ಕಾಗ ಉತ್ತಮ ಕೆಲಸ:

ನಾನು ಪಕ್ಷದಲ್ಲಿ ತಳಮಟ್ಟದಿಂದ ಸೇವಾದಳ ಮೂಲಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡು ಶ್ರಮ ಪಟ್ಟ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರುಗಳು ನನ್ನನ್ನು ನಿಗಮ ಮಂಡಳಿ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ನೀಡಿದ್ದಾರೆ. ನನ್ನ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ನನ್ನ ಸಮುದಾಯದ ಏಳಿಗೆಗೆ ಶ್ರಮಿಸುತ್ತೇನೆ. ಯಾವುದೇ ಟಿಕೆ ಟಿಪ್ಪಣಿಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ಕೃಷ್ಣ ಬೈರೇಗೌಡರಿಗೆ ಕೃತಜ್ಞತೆ :

ರಾಜ್ಯದ ಪ್ರತಿ ಜಿಲ್ಲೆಯನ್ನು ವಾಸಿಸುವಂತಹ ಅಲೆಮಾರಿ ಜನಾಂಗದವರಿಗೆ ಆಧಾರ ಕಾರ್ಡ್ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದಾಗ, ಕಂದಾಯ ಸಚಿವರಾದ ಕೃಷ್ಣಭೈರೇಗೌಡರು ತಕ್ಷಣವೇ ಅಲೆಮಾರಿ ಜನಾಂಗದವರಿಗೆ ಆಧಾರ ಕಾರ್ಡ್ ಮಾಡಿಸಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ :

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರದಿಂದ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಮಹಿಳೆಯರಿಗೆ ಹಾಗೂ ಬಡ ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ :

ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮಹಿಳಾ ಸಂಘದ ಸದಸ್ಯರಿಗೆ ತಲಾ ೫೦ ಸಾವಿರ ರೂಪಾಯಿಗಳನ್ನು ಸಾಲ ನೀಡಲಾಗುತ್ತದೆ. ಮಹಿಳೆಯರು ಇದರ ಸದ್ಬಳಕೆಯ ಮಾಡಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ವಿದ್ಯಾವಂತರಾಗಿ ಮಾಡಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿ, ಅಪರ ಪೊಲೀಸ್ ವರಿಷ್ಟಾಧಿಕಾರಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಅಲೆಮಾರಿ ಅಭಿವೃದ್ಧಿ ನಿಗಮದ ಏಕಲವ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಸಹಾಯಕ ನಿರ್ದೇಶಕಿ ಅಂಜಲಿ, ಎಲ್ಲಾ ತಹಸಿಲ್ದಾರ್ಗಳು, ಅನುಷ್ಠಾನ ಸಮಿತಿ ಸದಸ್ಯರಾದ ನಾಗರಾಜ್, ಮೋಹನ್, ಶ್ರೀಪತಿ, ವೆಂಕಟೇಶ್, ಮುರಳಿ, ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೮ : ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ಸಭೆ ನಡೆದಸಿದರು. ಜಿಲ್ಲಾಧಿಕಾರಿ ಎಂ.ಆರ್.ರವಿ, ಅಪರ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್ ಮುಂತಾದವರು ಇದ್ದರು.