ಕಲಬುರಗಿ: ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ನೇಮಿಸುವಂತೆ ಒತ್ತಾಯಿಸಿ ಇಲ್ಲಿನ ಹಿಂದು ಜಾಗೃತಿ ಸೇನಾ ಪ್ರಮುಖರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ರಕ್ತದಲ್ಲಿ ಪತ್ರ ಬರೆದು ಒತ್ತಡ ಹೇರಿದ್ದಾರೆ.
ಸೇನಾ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾಧಿ, ಕಾಳಗಿ ತಾಲೂಕು ಅಧ್ಯಕ್ಷ ಶಂಕರ ಚೋಕಾ ಶನಿವಾರ ಇಲ್ಲಿ ತಮ್ಮ ರಕ್ತದಿಂದ ಪತ್ರವನ್ನು ಬರೆದು, ಅದನ್ನು ನಡ್ಡಾ ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ರವಾನಿಸಿದ್ದಾರೆ. ಕೂಡಲೇ ಯತ್ನಾಳ್ ಅವರ ಹೆಸರನ್ನು ವಿಪಕ್ಷ ನಾಯಕ ಸ್ಥಾನಕ್ಕೆ ಘೋಷಿಸುವಂತೆ ಈ ಮೂಲಕ ಬೇಡಿಕೆ ಮಂಡಿಸಿದ್ದಾರೆ.
ರಕ್ತದಲ್ಲಿ ಬರೆದ ಪತ್ರವನ್ನು ಮಾಧ್ಯಮಗಳಿಗೆ ಪ್ರದಶರ್ಿಸಿ ಮಾತನಾಡಿದ ಲಕ್ಷ್ಮೀಕಾಂತ ಸ್ವಾಧಿ, ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಚಿಂತನ-ಮಂಥನ ನಡೆದಿವೆ. ಸಾಫ್ಟ್ ಹಿಂದುತ್ವದ ಧೋರಣೆ ಸಹ ಈ ಸೋಲಿನ ಕಾರಣಗಳಲ್ಲಿ ಒಂದಾಗಿದೆ. ಹೀಗಾಗಿ ಪ್ರಖರ ಹಿಂದುತ್ವವಾದಿ ಚಿಂತಕರಾದ ಯತ್ನಾಳ್ ಅವರಿಗೆ ಪ್ರತಿಪಕ್ಷ ನಾಯಕರನ್ನಾಗಿ ಮಾಡಿದರೆ ಪಕ್ಷದ ಸಂಘಟನೆಗೆ ಹೊಸ ಶಕ್ತಿ ತುಂಬಲು ಸಾಧ್ಯ ಎಂದು ಹೇಳಿದರು