ಪಾಂಡವಪುರ : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಗುರುವಾರ ಸಂಜೆ ನೇಣಿಗೆ ಶರಣಾಗಿದ್ದಾನೆ.
ಪಟ್ಟಣದ ಕಾಮನಚೌಕದ ನಿವಾಸಿ ಹರೀಶ್ ಎಂಬುವವರ ಪುತ್ರ ಎಚ್.ಷಣ್ಮುಖ(20) ಮೃತ. ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಈತ ಮನೆಯ ಮಹಡಿ ಕೊಠಡಿಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಓದಲೆಂದು ಮಹಡಿಗೆ ತೆರಳಿದ್ದ ಮಗ ಬಹಳ ಸಮಯವಾದರೂ ಕೆಳಗಿಳಿದು ಬಾರದ ಕಾರಣ ತೆರಳಿದ ತಾಯಿಗೆ ಮಗ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ತಕ್ಷಣ ಅಕ್ಕಪಕ್ಕದ ಮನೆಯವರ ಸಹಾಯದಿಂದ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಆತ್ಮಹತ್ಯೆಗೆ ಶರಣಾಗುವ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ತಾನು ವ್ಯಕ್ತಿಯೊಬ್ಬನ ಮೋಸಕ್ಕೆ ಜಾಲಕ್ಕೆ ಸಿಲುಕಿದ್ದೇನೆ. ತಂದೆ-ತಾಯಿಯ ಚಿನ್ನಾಭರಣಗಳನ್ನು ಅಡವಿಟ್ಟು ಆತನಿಗೆ ಲಕ್ಷಾಂತರ ರೂ. ಹಣ ನೀಡಿದ್ದೇನೆ. ಆತ ಮತ್ತಷ್ಟು ಹಣ ನೀಡುವಂತೆ ಪದೇ ಪದೇ ದೂರವಾಣಿ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದ, ಹಣ ಕೊಡದಿದ್ದರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸುವುದಾಗಿ ಹೆದರಿಸುತ್ತಿದ್ದ ಎಂದು ತಿಳಿಸಿದ್ದಾನೆ.
ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ವಿವೇಕಾನಂದ, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಮೃತನ ಮನೆಗೆ ತೆರಳಿ ಪರಿಶೀಲನೆ ನಡೆಸಿ ಡೆತ್‌ನೋಟ್, ಯುವಕ ಬಳಸುತ್ತಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.