ನ್ಯೂಸ್

ಮೋದಿ ಫೋಟೋ ಇದೆ ಎಂದು ಜನೌಷಧ ಕೇಂದ್ರ ಬಂದ್

ಜನೌಷಧ ಕೇಂದ್ರಗಳಿಂದ ಬಡ ರೋಗಿಗಳಿಗೆ ಬಹಳ ಅನುಕೂಲ ಆಗುತಿತ್ತು. ಅದರಲ್ಲಿ ಮೋದಿ ಫೋಟೋ ಇದೆ ಎಂದು ಅವುಗಳನ್ನು ಮುಚ್ಚಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇದ್ದ ಜನೌಷಧ ಕೇಂದ್ರಗಳ ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ. ಮೋದಿ ಈ ದೇಶದ ಪ್ರಧಾನಿ. ಅವರ ಫೋಟೋ ಹಾಕಿಕೊಳ್ಳಲೇ ಬೇಕು. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆದರೆ ಅವರ ಫೋಟೋ ಹಾಕೋದು ಬೇಡವಾ? ಇಂತಹ ಕೆಟ್ಟ, ಕೊಳಕು ಮನಸ್ಸಿನ ಕೆಟ್ಟ ಸರ್ಕಾರ ಯಾರಿಗೂ ಬೇಡ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ರಾಜ್ಯದಲ್ಲಿ ಕರೊನಾ ಭೀತಿ ಮತ್ತೆ ಶುರುವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ಆಸ್ಪತ್ರೆಗಳಿಗೆ ಸಚಿವರು ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕು ಎಂದು ಹೇಳಿದರು.

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರಾಗಿರುವುದು ಸರಿಯಲ್ಲ. ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ನೀತಿ ಆಯೋಗವನ್ನು ಅಯೋಗ್ಯ ಆಯೋಗ ಎಂದಿರುವುದು ಸರಿಯಲ್ಲ. ಇಂತಹ ಮಾತುಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಪೆಟ್ಟು ಬೀಳಲಿದೆ. ನೀತಿ ಆಯೋಗದ ಸಭೆಗಿಂತ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಪ್ರಮುಖವಾಗಿತ್ತಾ ಎಂದು ವಾಗ್ದಾಳಿ ನಡೆಸಿದರು.

ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯನ್ನಾಗಿ ನಟಿ ತಮನ್ನಾ ಭಾಟಿಯಾ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ನಮ್ಮಲ್ಲಿ ಖ್ಯಾತ ನಟ, ನಟಿಯರು ಇರಲಿಲ್ಲವೇ? ಕನ್ನಡಿಗರಾದ ರಚಿತಾ ರಾಮ್, ಐಶ್ವರ್ಯ ರೈ, ರಶ್ಮಿಕಾ ಮಂದಣ್ಣ ಇರಲಿಲ್ಲವೇ? ಪುನಿತ್ ರಾಜಕುಮಾರ್ ಯಾವುದೇ ಸಂಭಾವನೆ ಪಡೆಯದೇ ಕೆಎಂಎಫ್‌ಗೆ ರಾಯಭಾರಿ ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು.

ಆಕೆಗೆ 2 ಕೋಟಿ ಕೊಟ್ಟು, ಉಳಿದ ಹಣವನ್ನು ಸಿಎಂ ಅಕ್ಕಪಕ್ಕದವರು ಇಟ್ಟುಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಕುಟುಂಬದ ಯಾರನ್ನಾದರೂ ಮೈಸೂರು ಸ್ಯಾಂಡಲ್‌ಗೂ ರಾಯಭಾರಿಯನ್ನಾಗಿ ನೇಮಕ ಮಾಡಬಹುದಿತ್ತು. ನಟ ಶಿವರಾಜಕುಮಾರ್ ಆಗುತ್ತಿರಲಿಲ್ಲವಾ? ಒಂದು ಐಟಂ ಸಾಂಗ್‌ಗೆ ಒಂದು ಕೋಟಿ ರೂ. ಕೊಡ್ತಾರೆ. ಒಂದು ರೆಕಾರ್ಡಿಂಗ್‌ಗೆ ಆರುವರೆ ಕೋಟಿ ರೂ. ಕೊಡುವ ಅಗತ್ಯವೇನಿತ್ತು ? ಸಿದ್ದರಾಮಯ್ಯ ಸರ್ಕಾರ ಹಣವನ್ನು ಲೂಟಿ ಮಾಡಿ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದರು.

ಮೈಸೂರು ರಾಜಮನೆತನದ ಬಗ್ಗೆ ಜನರಿಗೆ ಈಗಲೂ ಅಭಿಮಾನವಿದೆ. ಹಾಗಾಗಿ ಯದುವೀರ್ ಒಡೆಯರ್ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯನ್ನಾಗಿ ಮಾಡಿದರೆ ಒಳಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಯಾಂಡಲ್ ಸೋಪ್‌ಗೆ ನಾನೇ ರಾಯಭಾರಿ ಆಗುತ್ತೇನೆ ಎಂಬ ವಾಟಾಳ್ ನಾಗರಾಜ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಟೋಪಿ ತೆಗೆದು ರಾಯಭಾರಿ ಆಗಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಹೈಕಮಾಂಡ್‌ಗೂ, ನಮಗೂ ಹಳೇ ಸಂಬಂಧ. ಎಲ್ಲ ವಿಚಾರಗಳ ಬಗ್ಗೆ ಪತ್ರ ಬರೆಯಬೇಕು. ಆದರೆ, ನಾನು ಪತ್ರ ಬರೆದರೂ ಓದೋರು ಇಲ್ಲ. ಒಟ್ಟಾರೆ ಸಿದ್ದರಾಮಯ್ಯ ಕಾಂಗ್ರೆಸ್ ಬಾಗಿಲು ಹಾಕಿಸಿಯೇ ಹೋಗುತ್ತಾರೆ ಎಂದರು.

ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಹಾಳು ಮಾಡಿಬಿಟ್ಟರು. ಎಚ್.ಕೆ ಪಾಟೀಲ್‌ರಂತಹ ಹಿರಿಯ ನಾಯಕರೇ ಮೌನ ವಹಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುವ ಒಬ್ಬ ಮಂತ್ರಿಯೂ ಇಲ್ಲ. ಉಸ್ತುವಾರಿ ಸಚಿವರು ಕಳೆದ ಬಾರಿಯ ದಸರಾ ಮಹೋತ್ಸವದ ಲೆಕ್ಕ ಕೊಟ್ಟಿಲ್ಲ. ಕೇಳಿದರೆ ಕೊಡಲ್ಲ ಏನು ಮಾಡ್ತೀರಾ ಅಂತಾರೆ. ಯಾವ ಲೆಕ್ಕವೂ ಈ ಸರ್ಕಾರದಲ್ಲಿ ಸಿಗುವುದಿಲ್ಲ. ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಕೂಡ ಕೊಟ್ಟಿಲ್ಲ ಎಂದರು.