ಯಾಜ್ಞವಲ್ಕ್ಯನ್ನು ಕೇಳಿದರೆ ಒಂದೆಡೆಗೆ (ಬೃ.ಉ. 2.4.4.12) ‘‘ನ ಪ್ರೇತ್ಯ ಸಂಜ್ಞಾಸ್ತಿ’’ ಎಂದುಬಿಟ್ಟರು! ‘‘ಸತ್ತಮೇಲೆ ಸಂಜ್ಞೆ ಇಲ್ಲ’’. ಹಾಗೆಂದರೆ ಜೀವಾತ್ಮನು ಮುಖ್ಯ ಲಕ್ಷಣವಾಗಿ ಹೊಂದಿರುವ ‘‘ಜ್ಞಾತೃತ್ವವು’’ ಇಲ್ಲವಾಯಿತೇ? ಎಂದು ಪ್ರಶ್ನೆ. ಇಲ್ಲವೆಂದರೆ ಆತ್ಮನಾಶ. ಇದೆಯೆಂದರೆ ‘‘ಮತ್ತೆ ಹೀಗೇಕೆ ಹೇಳಿದರು?’’ ಎಂದು ಮರುಪ್ರಶ್ನೆ. ಇಲ್ಲೇ, ಅವರು ‘‘ವಿಜ್ಞಾನಘನ ಏವ’’ ಎಂದೂ ಹೇಳಿದ್ದಾರೆ. ಇಲ್ಲಿ ಉಳಿಯುವ ‘‘ವಿಜ್ಞಾನ’’ಕ್ಕೂ ಅಳಿಯುವ ‘‘ಸಂಜ್ಞೆ’’ಗೂ ಏನು ವ್ಯತ್ಯಾಸ? ಈ ವಿಷಯದಲ್ಲಿ ಬ್ರಹ್ಮವಾದಿನಿಯಾದ ಮೈತ್ರೇಯಿಗೇ ತಿಳಿಯಲಿಲ್ಲ. ಯಾಜ್ಞವಲ್ಕ್ಯೇ ಸ್ವಯಂ ಹೇಳಿದರೂ ಸಹ! ನಮ್ಮ ಗತಿಯೇನು? ಅವರೇ (4.3.23ರಿಂದ 30) ಇನ್ನೊಂದೆಡೆಗೆ ಹೇಳುತ್ತಾರೆ; ‘‘ಮುಕ್ತಿಯಲ್ಲಿ ನೋಡುವವನ ನೋಟಕ್ಕಾಗಲೀ, ಕೇಳುವವನ ಶ್ರವಣಕ್ಕಾಗಲೀ... ಇತ್ಯಾದಿಗಳಿಗೆ ವಿಪರಿಲೋಪವಿಲ್ಲ, ವಿಜ್ಞಾತೃವಿನ ವಿಜ್ಞಾನಕ್ಕೆ ಅಳಿವಿಲ್ಲ, ಅವಿನಾಶಿಯಾದ್ದರಿಂದ’’ ಎಂದು. ‘‘ಪ್ರಿಯಳಾದ ಸ್ತ್ರೀಯನ್ನು ಚೆನ್ನಾಗಿ ಪರಿಷ್ವಂಗ ಮಾಡಿಕೊಂಡಾಗ ಆಗುವ ಅನುಭವದಂತೆ ಜೀವಾತ್ಮನು ಪ್ರಾಜ್ಞನಾದ ಪರಮಾತ್ಮನ ಆಲಿಂಗನ ಸುಖದಲ್ಲಿ ಮುಳುಗಿ, ಹೊರಗೆ ಒಳಗೆಂಬ ಭೇದರಹಿತವಾದ ಅಖಂಡ ಅನುಭೂತಿಯಲ್ಲಿರುತ್ತಾನೆ.’’ (4.3.21) ಎಂದೂ ಹೇಳಿದ್ದಾರೆ. ಅವರು ಹುಚ್ಚರಲ್ಲ, ನಿಜ. ನಮ್ಮಂಥ ‘‘ಬೃಹಸ್ಪತಿ’’ಗಳಿಗೆ ಇದೆಲ್ಲ ಸಂಜಸವಾಗಿ ತಿಳಿಯುವುದೆಂತು? ಜೀವಾತ್ಮನು ತಾನಾಗಿಯೇ ಮುಕ್ತಿಯಲ್ಲಿ ಉಳಿಯದಿದ್ದರೆ, ಮೋಕ್ಷದ ವಿಷಯದಲ್ಲಿ ರುಚಿಯೂ, ಪ್ರಯತ್ನವೂ ಹೇಗೆ ಸಾಧ್ಯ? ಉಳಿಯುವುದಾದರೆ, ಅವನು ಕಳೆದುಕೊಳ್ಳುವುದೇನನ್ನು? ಸಂಪಾದಿಸುವುದೇನನ್ನು? ಇದು ಬಾಯಲ್ಲಿ ಹೇಳತಕ್ಕದ್ದಲ್ಲವೆಂದೂ, ಸ್ವಯಂ ಅನುಭೂತಿಯಿಂದಲೇ ತಿಳಿಯುವುದೆಂದೂ ಹೇಳಿದರೆ, ಶ್ರುತಿಯು ಯಾರಿಗೆ? ವೇದಾಂತ ಜಿಜ್ಞಾಸೆ ಯಾರಿಗೆ? ಮೂರ್ಛಿತನೂ, ಭ್ರಾಂತನೂ, ಅಮಲೇರಿದವನೂ ತಾವೂ ಜೀವನ್ಮುಕ್ತ ರಾಗಿರುವುವೆಂದರೆ, ಅಲ್ಲವೆನ್ನುವುದು ಹೇಗೆ? ಇದೆಲ್ಲ ದೊಡ್ಡ ಗೊಂದಲ. ನಚಿಕೇತನು ಇಂತಹ ಚರ್ಚೆಗಳನ್ನು ತಂದೆಯ ಆಶ್ರಮದಲ್ಲಿ ಕೇಳಿ ಕೇಳಿ ಸಾಕಾಗಿರಬೇಕೆಂದು ತೋರುತ್ತದೆ. ಅದಕ್ಕಾಗಿಯೇ ಈ ಪ್ರಶ್ನೆ ಕೇಳಿದ್ದಾನೆ. ಧರ್ಮರಾಜನು ಎಲ್ಲಿ ಸೋತನೋ ಅಲ್ಲೇ ಈ ಬಾಲಕನು ಧೀರನಾಗಿ ಕೇಳುತ್ತಿದ್ದಾನೆ!
ತತ್ತ್ವಜಿಜ್ಞಾಸೆಯ ಅನಿವಾರ್ಯತೆ: ಇಲ್ಲಿ ಧರ್ಮರಾಜನ ಕೊನೆಯ ಮಾತಿನ ಸಿದ್ಧಾಂತ. ಲೋಕನೀತಿಯನ್ನು ಕುರಿತದ್ದು. ಮಹಾಜನರಂತೆ ನಡೆಯುವುದು. ಇದರಲ್ಲಿ ಯಾರಿಗೂ ಅಪನಂಬಿಕೆಯಿಲ್ಲ. ಆದರೆ, ಶ್ರುತಿಗಳು ಬೇರೆ ಬೇರೆಯೆಂದೋ, ಋಷಿಗಳ ಮತಗಳು ಭಿನ್ನಭಿನ್ನವಾಗಿ ಕಾಣುತ್ತವೆಯೆಂದೋ, ತರ್ಕಕ್ಕೆ ಬುಡವೇ ಇಲ್ಲವೆಂದೋ, ಭಾವಿಸಿ, ಧರ್ಮರಾಜನು ನಿರಾಶನಾದಂತೆ, ಎಲ್ಲ ಜಿಜ್ಞಾಸುಗಳೂ ಮಾಡಿದರೆ, ಇದು ಪರೋಕ್ಷವಾಗಿ ಶ್ರುತಿನಿರಾಸಪೂರ್ವಕವಾದ, ತತ್ತ್ವಶಾಸ್ತ್ರವನ್ನು ವಿರೋಧಿಸುವ, ನಾಸ್ತಿಕ ಮತದಲ್ಲೇ ಪರ್ಯವಸಾನವಾಗುವುದು.
(ಲೇಖಕರು- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)