ಬೆಂಗಳೂರು: ಮೊರಾರ್ಜಿ ವಸತಿ ಶಾಲೆಗೆ ಆಯಾ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ.75, ಹೊರ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ.25 ಪ್ರವೇಶಾತಿಗೆ ಅವಕಾಶ(Morarji Residential School Admission; 70% seats reserved for taluk candidates) ಮಾಡಿಕೊಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ(H C Mahadevappa) ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರ ಪ್ರಶ್ನೆಗೆ ಉತ್ತರಿಸಿದರು.
ಶೈಕ್ಷಣಿಕವಾಗಿ ಹಿಂದುಳಿದ ವಿಶೇಷ ಗುಂಪುಗಳ ಮಕ್ಕಳಿಗೆ ಪ್ರವೇಶಾತಿ ನೀಡಿ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸಾಯಿ ಕರ್ಮಚಾರಿ/ಗುರುತಿಸಿರುವ ಮ್ಯಾನ್ಯುಯಲ್ ಸ್ಕಾೃವೆಂಜರ್/ಚಿಂದಿ ಆಯುವವರು/ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಶೇ.10, ಬಾಲ ಕಾರ್ಮಿಕರು/ಜೀತ ವಿಮುಕ್ತ ಕಾರ್ಮಿಕರ ಮಕ್ಕಳು ಹಾಗೂ ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳಿಗೆ ಶೇ.10, ಶೇ.25ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ಮಕ್ಕಳು/ಎಚ್‌ಐವಿಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಕ್ಕಳಿಗೆ ಶೇ.10, ಗುರುತಿಸಿರುವ ಅಲೆಮಾರಿ/ಅರೆ ಅಲೆಮಾರಿ/ ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯ/ ಸೈನಿಕರು ಮತ್ತು ಮಾಜಿ ಸೈನಿಕರು/ ಸರ್ಕಾರದ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳಿಗೆ ಶೇ.10, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಶೇ.10 ಮೀಸಲಾತಿ ಕಲ್ಪಿಸಲಾಗಿದೆ ಎಂದು ಮಹದೇವಪ್ಪ ವಿವರಿಸಿದರು.