ನ್ಯೂಸ್

ಮೊಬೈಲ್​ ಗೇಮ್​ ವಿಚಾರಕ್ಕೆ ಚಾಕುವಿನಿಂದ ಇರಿತ

ಹುಬ್ಬಳ್ಳಿ: ಚೌಕಾಬಾರ ಮೊಬೈಲ್​ ಗೇಮ್​ ಆಡುವ ವಿಚಾರಕ್ಕೆ ಜಗಳ ಉಂಟಾಗಿ ಯುವಕನೊಬ್ಬನಿಗೆ ಮತ್ತೊಬ್ಬ ಚಾಕುವಿನಿಂದ ಇರಿದು ಗಾಯಪಡಿಸಿದ ಗಟನೆ ಇಲ್ಲಿನ ಯಲ್ಲಾಪೂರ ಓಣಿಯ ತತ್ತಿಪೂರಿ ಚಾಳದಲ್ಲಿ ಸೋಮವಾರ ನಡೆದಿದೆ.
ತತ್ತಿಪೂರಿ ಚಾಳದ ಸಾಹಿಲ್​ ಮಹ್ಮದರಫೀಕ್​ ನದಾ ಚಾಕು ಇರಿತಕ್ಕೀಡಾದವ. ಯಲ್ಲಾಪೂರ ಓಣಿ ಗೌಸಕಾ ಮಾಮು ದರ್ಗಾ ಬಳಿಯ ನಿವಾಸಿ ಅಪ್ತಾಭ ಯಲಿಗಾರ ಹಲ್ಲೆ ನಡೆಸಿದ ಆರೋಪಿ.
ಅಪ್ತಾಭ ತನ್ನ ಗೆಳೆಯ ಹುಸೇನ್​ ಜತೆ ಮೊಬೈಲ್​ನಲ್ಲಿ ಚೌಕಾಬಾರ ಗೇಮ್​ ಆಡುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ಸಾಹಿಲ್​ ಆಟ ನೋಡುತ್ತ ನಿಂತಿದ್ದ. ನಂತರ ಹೀಗೆ ಆಟವಾಡು ಎಂದು ಹುಸೇನ್​ಗೆ ಹೇಳಿ ಕೊಡುತ್ತಿದ್ದ. ಇಷ್ಟಕ್ಕೆ ಆಕ್ರೋಶಗೊಂಡ ಅಪ್ತಾಭ, "ನಿಂಗ್ಯಾಕ ಬೇಕಲೇ ಮಗನಾ, ಸುಮ್ಮನ ಮನಿಗೆ ಹೋಗು' ಎಂದು ಸಾಹಿಲ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಎಡಗೈ ಭುಜದ ಬಳಿ ಹಾಗೂ ತಲೆಯ ಎಡಭಾಗಕ್ಕೆ ಚುಚ್ಚಿದ್ದ. ಕೈಮುಷ್ಠಿ ಮಾಡಿಕೊಂಡು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಈ ಕುರಿತು ಗಂಟಿಕೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.