ಉಡುಪಿ: ನಗರದಲ್ಲಿ ಸರ್ಕಾರದ ಕರ್ಫ್ಯೂ ಆದೇಶದ ಹಿನ್ನೆಲೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಮಹಿಳೆಯೊಬ್ಬರು ವಾಗ್ವಾದ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಶನಿವಾರ ಬೆಳಗ್ಗೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಸಾಮಾಜಿಕ ಕಾರ್ಯಕರ್ತೆ ನೀತಾ ಕಾಮತ್ ಎಂಬವರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಕಾರು ಡ್ರೈವ್ ಮಾಡುತ್ತಿದ್ದರು. ಈ ವೇಳೆ ಸಂಚಾರ ಪೊಲೀಸ್ ಠಾಣೆ ಎಸ್‌ಐ ಖಾದರ್ ಅವರು, ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ ದಂಡ ಪಾವತಿಸುವಂತೆ ಹೇಳಿದ್ದಾರೆ. ಇದಕ್ಕೊಪ್ಪದ ಮಹಿಳೆ ಪೊಲೀಸರೊಂದಿಗೆ ಏರುದನಿಯಲ್ಲಿ ತನ್ನನ್ನು ಸಮರ್ಥಿಸಿಕೊಂಡು ವಾಗ್ವಾದ ನಡೆಸಿದ್ದಾರೆ. ನಂಗೆ ರೈಟ್ಸ್ ಇದೆ. ಟೈಮ್ ಇಲ್ಲ, ನೀವು ಬೊಬ್ಬೆ ಹಾಕಬೇಡಿ ಎಂದಿದ್ದಾರೆ. ಬಳಿಕ ಗೂಗಲ್‌ಪೇ ಮೂಲಕ ದಂಡ ಪಾವತಿಸಿ ನಂತರ ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ. ಟ್ರಾಫಿಕ್ ಪೊಲೀಸರು 3 ಸಾವಿರ ರೂ ದಂಡ ಕಟ್ಟಿಸಿಕೊಂಡು ಮಹಿಳೆಗೆ ರಶೀದಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಎಂದು ಮಹಿಳೆಗೆ ನಗರಸಭೆಯಿಂದ ಪಾಸ್ ನೀಡಿದ್ದಾರೆ. ಈ ಬಗ್ಗೆ ನಾವು ಪ್ರಶ್ನಿಸಿಲ್ಲ, ಆದರೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಕಾರು ಚಾಲನೆ ಮಾಡುತ್ತಿದ್ದರು. ಇದಕ್ಕೆ ದಂಡ ವಿಧಿಸಿದ್ದಕ್ಕೆ ನಮ್ಮೊಂದಿಗೆ ವಾಗ್ವಾದ ನಡೆಸಿದರು ಎಂದು ಎಸ್‌ಐ ಖಾದರ್ ವಿಜಯವಾಣಿಗೆ ತಿಳಿಸಿದ್ದಾರೆ.