ನ್ಯೂಸ್

ಮೊಬೈಲ್ ಕ್ಲಿನಿಕ್‌ಗಳಿಗೆ ಸಚಿವ, ಶಾಸಕರಿಂದ ಹಸಿರು ನಿಶಾನೆ

ಚಿತ್ರದುರ್ಗ: ರಾಜ್ಯ ಸರ್ಕಾರ ರೂಪಿಸಿರುವ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆಯ ಸೌಲಭ್ಯವನ್ನು ಕಾರ್ಮಿಕರು ಮತ್ತು ಅವರ ಅವಲಂಬಿತರು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಅನುಷ್ಠಾನಗೊಳಿಸುತ್ತಿರುವ ಸಂಚಾರಿ ಆರೋಗ್ಯ ಕ್ಲಿನಿಕ್‌ಗಳ ಉದ್ಘಾಟನಾ ಕಾರ‌್ಯಕ್ರಮದಲ್ಲಿ ಮಾತನಾಡಿದರು.

ಕಾರ್ಮಿಕರ ಮತ್ತು ಅವರ ಅವಲಂಬಿತರ ಆರೋಗ್ಯ ರಕ್ಷಣೆಗೆ ಸರ್ಕಾರ ಕ್ರಮವಹಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕಟ್ಟಡ ನಿರ್ಮಾಣ ಕಾರ್ಮಿಕರಿರುವ ಸ್ಥಳಕ್ಕೆ ತೆರಳಿ ಉಚಿತವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಸಲಹೆ ಮತ್ತಿತರ ಸೇವೆ ಒದಗಿಸಲು ಸಂಚಾರಿ ಆರೋಗ್ಯ ಕ್ಲಿನಿಕ್‌ಗಳು ಕಾರ್ಯಾರಂಭಗೊಂಡಿವೆ. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಅವರ ಅವಲಂಬಿತರು ಯೋಜನೆಯನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕೆಂದು ಕೋರಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಾಗೂ ಸಚಿವರು ಮೊಬೈಲ್ ಕ್ಲಿನಿಕ್‌ಗಳಿಗೆ ಹಸಿರು ನಿಶಾನೆ ತೋರಿಸಿದರು.

ಕಾರ್ಮಿಕ ಅಧಿಕಾರಿ ಅನಿಲ ಬಾಲಚಂದ್ರ ಬಗಟಿ ಮಾತನಾಡಿ, ಎರಡು ತಾಲೂಕುಗಳಿಗೆ ಒಂದರಂತೆ ಜಿಲ್ಲೆಗೆ ಮೂರು ಸಂಚಾರಿ ಆರೋಗ್ಯ ಘಟಕ ವಾಹನಗಳು ಮಂಜೂರಾಗಿವೆ. ಸದ್ಯಕ್ಕೆ ಜಿಲ್ಲೆಯಲ್ಲಿ ಎರಡು ವಾಹನಗಳು ಕಾರ‌್ಯನಿರ್ವಹಿಸಲಿವೆ. ಈ ಘಟಕಗಳು ರೂ ಟ್ ಮ್ಯಾಪ್‌ನಂತೆ ನಿಗಧಿತ ಸ್ಥಳಗಳಲ್ಲಿ ಕನಿಷ್ಠ 4 ಗಂಟೆ ಕಾರ್ಯನಿರ್ವಹಿಸಲಿದೆ ಎಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಕಾರ್ಮಿಕ ನಿರೀಕ್ಷಕರಾದ ರಾಜಣ್ಣ, ಕುಸುಮಾ, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್‌ಕುಮಾರ್ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಇದ್ದರು.