ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂದೆ ಭಾನುವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಅಜಯ್, ವರದರಾಜು, ಪ್ರಮೋದ್, ಶಿವಲಿಂಗಮೂರ್ತಿ, ವರದನಾಯಕ, ಚಾ.ರಾ.ಕುಮಾರ್ ಮತ್ತು ಇತರರು ಇದ್ದರು. 
ನ್ಯೂಸ್

ಮೊಟ್ಟೆ ಎಸೆತ ರಾಜಕಾರಣ ಅಪಾಯಕಾರಿ

ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಮೊಟ್ಟೆ ಎಸೆತ ರಾಜಕಾರಣ ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ನಿಲ್ಲಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂದೆ ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಜಮಾಯಿಸಿ ಬೇಡ ಬೇಡ ಮೊಟ್ಟೆ ಎಸೆತ ಸಂಸ್ಕೃತಿ ಬೇಡ ಎಂದು ಘೋಷಣೆ ಕೂಗಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಬ್ಬ ಪ್ರಬುದ್ಧ ರಾಜಕಾರಣಿ. ಸಿದ್ದರಾಮಯ್ಯನವರ ಮೇಲೆ ಕೊಡಗಿನಲ್ಲಿ ಕೋಳಿ ಮೊಟ್ಟೆ ಎಸೆದದ್ದು ಸರಿಯಲ್ಲ. ಈ ಸಂಸ್ಕೃತಿ ಇರಬಾರದು. ಇದರಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ. ಚುನಾವಣಾ ವ್ಯವಸ್ಥೆಗೆ ಭಂಗ ಬರುತ್ತದೆ ಎಂದರು.
ಟಿಪ್ಪುಸುಲ್ತಾನ್ ಈ ದೇಶದ ಮಹಾವೀರ. ದೇಶಕ್ಕಾಗಿ ತನ್ನ ಎರಡೂ ಮಕ್ಕಳನ್ನು ಒತ್ತೆಯಿಟ್ಟಿದ್ದ. ಟಿಪ್ಪುಸುಲ್ತಾನ್ ಬಗ್ಗೆ ಮಾತನಾಡಿದರೆ ನೀವು ಅದಕ್ಕೆ ಉತ್ತರ ಕೊಡಿ. ಉತ್ತರ ಕೊಡದೆ ನೀವು ಗೂಂಡಾ ರಾಜಕಾರಣ ಮಾಡಿದರೆ ಒಳ್ಳೆಯದಲ್ಲ ಎಂದರು.
ಮುಖ್ಯಮಂತ್ರಿ ರಾಜ್ಯದ ಕಾನೂನು ಶಾಂತಿ ಕಾಪಾಡಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಎಲ್ಲರಿಗೂ ಅಧಿಕಾರ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಪಾತಕರನ್ನು ಸಂಪೂರ್ಣವಾಗಿ ಶಿಕ್ಷೆಗೆ ಗುರಿಪಡಿಸಬೇಕು. ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಅಜಯ್, ವರದರಾಜು, ಪ್ರಮೋದ್, ಶಿವಲಿಂಗಮೂರ್ತಿ, ವರದನಾಯಕ, ಚಾ.ರಾ.ಕುಮಾರ್ ಇತರರಿದ್ದರು.