ನ್ಯೂಸ್

ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವೆ

ಮೈಸೂರು ಭಾಗದಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಿಂದ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬಿಜೆಪಿಯ ಮೈಸೂರು ಗ್ರಾಮಾಂತರ ಘಟಕದ ವತಿಯಿಂದ ನಗರದ ರಾಜೇಂದ್ರ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಂಘಟನಾತ್ಮಕ ವಿಶೇಷ ಸಭೆಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೈಸೂರು ಭಾಗದವರು. ಈ ಭಾಗವನ್ನು ನಾನು ಸವಾಲಾಗಿ ಸ್ವೀಕರಿಸಿದ್ದು, ಮೈಸೂರು ಭಾಗದ ಜಿಲ್ಲೆಗಳಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಹೆಚ್ಚು ಶಾಸಕರನ್ನು ಗೆಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು. ಪಕ್ಷವನ್ನು ಸಂಘಟಿಸುವ ಸಂಬಂಧ ಎಲ್ಲರೂ ಕೈಜೋಡಿಸಬೇಕು. ಈ ಭಾಗ ವಿಧಾನಸಭಾ ಕ್ಷೇತ್ರಗಳಿಂದ ಅತಿ ಹೆಚ್ಚು ಶಾಸಕರು ಬಿಜೆಪಿಯಿಂದ ಗೆದ್ದು ಬರಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು.

ಮುಂದೆ ಎದುರಾಗುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ನಮ್ಮ ಪಕ್ಷದ ಹೆಚ್ಚು ಅಭ್ಯರ್ಥಿಗಳು ಗೆಲ್ಲಬೇಕು. ಎಲ್ಲೆಡೆ ನಮ್ಮ ಪಕ್ಷವೇ ಅಧಿಕಾರ ಹಿಡಿಯಬೇಕು. ಹಾಗಾಗಿ, ಈ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿಗಳಿಗೆ ಗೆಲ್ಲುವ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತೇವೆ. ಆ ಮೂಲಕ ರಾಜ್ಯದ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಹೇಳಿದರು.

ಮೈಸೂರು ಭಾಗದೊಂದಿಗೆ ಯಡಿಯೂರಪ್ಪ ಅವರಿಗೆ ಅವಿನಾಭಾವ ಸಂಬಂಧ ಇದೆ. ಈ ಭಾಗ ಜನತೆ ಇಂದಿಗೂ ಬಿಎಸ್‌ವೈ ಅವರು ಮುಖ್ಯಮಂತ್ರಿಯಾಗಿ ನೀಡಿದ್ದ ಯೋಜನೆ, ಕೊಡುಗೆಗಳನ್ನು ಸ್ಮರಿಸಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಕೊಡುಗೆ ನೀಡಿದ್ದಾರೆ. ಮೈಸೂರಿನವರೇ ಆದ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಭಾಗಕ್ಕೆ ನೀಡಿದ ಕೊಡುಗೆ ಏನು? ಎಂಬುದರ ಬಗ್ಗೆ ತಿಳಿಸಲಿ, ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಯಾರು ಕೂಡ ಕಾಂಗ್ರೆಸ್ ಪಕ್ಷವನ್ನು ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ಕೇಳಿರಲಿಲ್ಲ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಮಾಡಲಾಗುತ್ತಿದೆ. ಇದೊಂದು ಜನರ ಜೇಬಿಗೆ ಕತ್ತರಿ ಹಾಕುವ ಬೋಗಸ್ ಸರ್ಕಾರವಾಗಿದೆ ಎಂದರು.