ಆರ್.ಕೃಷ್ಣ ಮೈಸೂರು
ನಷ್ಟ ತಗ್ಗಿಸಬೇಕು ಎನ್ನುವ ಉದ್ದೇಶದಿಂದ ಗ್ರಾಮಾಂತರ ವಿಭಾಗದಲ್ಲಿ ವಿಲೀನಗೊಂಡಿದ್ದ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಘಟಕವನ್ನು ಮರು ಸ್ಥಾಪಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಮೈಸೂರು ನಗರ ಸಾರಿಗೆ ಘಟಕವನ್ನು ಗ್ರಾಮಾಂತರ ಸಾರಿಗೆ ಘಟಕದಲ್ಲಿ ವಿಲೀನ ಮಾಡುವುದರಿಂದ ಸುಮಾರು 50 ರಿಂದ 100 ಕೋಟಿ ರೂ. ನಷ್ಟ ಕಡಿಮೆ ಅಗಲಿದೆ ಎನ್ನುವ ಲೆಕ್ಕಾಚಾರ ನಿಗಮಕ್ಕೆ ಇತ್ತು. ಆದರೆ ನಗರ ಸಾರಿಗೆ ವಿಲೀನದಿಂದ ನಷ್ಟ ಕಡಿಮೆ ಅಗುವುದಕ್ಕಿಂತ ನಗರ ಸಾರಿಗೆ ಹಾಗೂ ಗ್ರಾಮಾಂತರ ಸಾರಿಗೆ ಲೆಕ್ಕಾಚಾರವೇ ಸರಿಯಾಗಿ ದೊರೆಯದೆ ನಷ್ಟ ಎಷ್ಟು, ಉಳಿತಾಯ ಎಷ್ಟು ಎನ್ನುವ ಗೊಂದಲ ನಿಗಮಕ್ಕಾಗಿದೆ. ಜತೆಗೆ 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿ, 2 ಸಾವಿರಕ್ಕೂ ಹೆಚ್ಚು ಬಸ್‌ಗಳ ನಿರ್ವಹಣೆ ಕಷ್ಟಕರವಾಗುತ್ತಿದೆ. ಹೀಗಾಗಿ, ವಿಲೀನಗೊಂಡಿರುವ ನಗರ ಸಾರಿಗೆ ಘಟಕವನ್ನು ಗ್ರಾಮಾಂತರ ವಿಭಾಗದಿಂದ ಮತ್ತೆ ಬೇರ್ಪಡಿಸಿ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿಯೂ ನಗರ ಸಾರಿಗೆ ಘಟಕ ವಿಲೀನದಿಂದ ಉಂಟಾಗಿರುವ ಗೊಂದಲ, ತೊಂದರೆಯನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದರು. ಹೀಗಾಗಿ, ಘಟಕ ಪ್ರತ್ಯೇಕ ಗೊಳಿಸಲು ತಾತ್ವಿಕವಾಗಿ ಸಮ್ಮತಿಸಲಾಗಿತ್ತು. ಅದರಂತೆ ಈಗ ನಗರ ಸಾರಿಗೆ ಘಟಕ ಶೀಘ್ರವೇ ರಚನೆಗೆ ಸಿದ್ಧತೆ ನಡೆದಿದೆ.
ವಾಣಿಜ್ಯ ಉದ್ದೇಶಕ್ಕೆ ಅಸಮಾಧಾನ:
ನಗರ ಸಾರಿಗೆ ಘಟಕವನ್ನು ಗ್ರಾಮಾಂತರ ಘಟಕದಲ್ಲಿ ವಿಲೀನಗೊಳಿಸಿದ ಬಳಿಕ ಖಾಲಿಯಾಗಿ ಉಳಿಯುವ ಕಟ್ಟಡ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ಉದ್ದೇಶಿಸಿತ್ತು. ಆದರೆ ಈ ನಿರ್ಧಾರಕ್ಕೆ ಜಾಗವನ್ನು ಕೊಡುಗೆಯಾಗಿ ನೀಡಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಾರ್ವಜನಿಕರಿಗೆ ಉಪಯೋಗವಾಗುವ ಉದ್ದೇಶದಿಂದ ಜಾಗವನ್ನು ನಮ್ಮ ವಂಶಸ್ಥರು ಕೊಡುಗೆಯಾಗಿ ನೀಡಿದ್ದಾರೆ. ಹಾಗಾಗಿ ಜಾಗವನ್ನು ಕೊಡುಗೆ ನೀಡಿರುವ ಉದ್ದೇಶಕ್ಕೆ ಬಳಸಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಸಾಧ್ಯವಾಗದೆ ಹಾಗೇ ಉಳಿದಿದ್ದು, ಮರಳಿ ನಗರ ಸಾರಿಗೆ ಘಟಕಕ್ಕೆ ಜಾಗ ಬಳಸಿಕೊಳ್ಳಲು ಅನುಕೂಲವಾಗಲಿದೆ.
ಗ್ರಾಮಾಂತರಕ್ಕೂ ನಗರ ಸಾರಿಗೆ ವಿಸ್ತರಣೆ
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಇತರ ಜಿಲ್ಲೆಗಳಲ್ಲಿ ಆಗಿರುವಂತೆ ಮೈಸೂರು ಜಿಲ್ಲೆಯಲ್ಲೂ ಕೆಎಸ್‌ಆರ್‌ಟಿಸಿ ಸೇವೆಯನ್ನು ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಯೋಜನೆಗೂ ಮುನ್ನ 976 ಶೆಡ್ಯೂಲ್‌ನಲ್ಲಿ ಇಷ್ಟೇ ಪ್ರಮಾಣದ ಬಸ್‌ಗಳು 7,868 ಟ್ರಿಪ್ ಸಂಚಾರ ಮಾಡುತ್ತಿದ್ದವು. ಯೋಜನೆ ಜಾರಿಯ ನಂತರ 996 ಶೆಡ್ಯೂಲ್‌ನಲ್ಲಿ 8,084 ಟ್ರಿಪ್ ಸಂಚರಿಸುತ್ತಿದ್ದು, ನಿತ್ಯ 5,59,714 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 3,78,607 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಕೆಎಸ್‌ಆರ್‌ಟಿಸಿ, ನಗರ ಸಾರಿಗೆ ಬಸ್‌ಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ತಿ.ನರಸೀಪುರ, ಹುಣಸೂರಿಗೂ ಮೈಸೂರು ಸಿಟಿ ಬಸ್ ಸೌಕರ್ಯವನ್ನು ವಿಸ್ತರಿಸಲಾಗಿದೆ.
ಈಗಾಗಲೇ ಮೈಸೂರು- ನಂಜನಗೂಡು ನಡುವೆ ಸಿಟಿ ಬಸ್ ಸೇವೆಯನ್ನು 8 ವರ್ಷಗಳಿಂದ ನೀಡಲಾಗುತ್ತಿದೆ. ನಿತ್ಯವೂ ಈ ಮಾರ್ಗದಲ್ಲಿ 15 ಸಿಟಿ ಬಸ್‌ಗಳು 120 ಟ್ರಿಪ್ ಸೇವೆ ನೀಡುತ್ತಿವೆ. ಇದೀಗ ಮೈಸೂರು- ತಿ.ನರಸೀಪುರ ಮಾರ್ಗದಲ್ಲಿ ನಾಲ್ಕು ಬಸ್‌ಗಳು 25 ಟ್ರಿಪ್ ಹಾಗೂ ಮೈಸೂರು - ಹುಣಸೂರು ಮಾರ್ಗದಲ್ಲಿ 2 ಬಸ್‌ಗಳು 12 ಟ್ರಿಪ್ ಸೇವೆ ನೀಡಲಿದ್ದು, ಇದರಿಂದ ಮೈಸೂರು ನಗರ ಹಾಗೂ ಸುತ್ತಮುತ್ತಲ ಪಟ್ಟಣಗಳ ನಡುವೆ ಇರುವ ಗ್ರಾಮಗಳ ಜನರಿಗೂ ಅನುಕೂಲವಾಗಲಿದೆ.
ಆಡಳಿತಾತ್ಮಕ ಉದ್ದೇಶದಿಂದ ವಿಭಜನೆ
ನಗರ ಸಾರಿಗೆ ಹಾಗೂ ಗ್ರಾಮಾಂತರ ಸಾರಿಗೆ ಘಟಕಗಳ ವಿಲೀನದಿಂದ ನಷ್ಟ ತಗ್ಗಿಸಬಹುದು ಎನ್ನುವ ಉದ್ದೇಶ ಇತ್ತು. ಆದರೆ 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿ, 2 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಆಡಳಿತಾತ್ಮಕವಾಗಿ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಹಾಗಾಗಿ, ಆಡಳಿತ ಮಂಡಳಿಯಿಂದ ಮತ್ತೆ ನಗರ ಸಾರಿಗೆ ಘಟಕವನ್ನು ಪ್ರತ್ಯೇಕಗೊಳಿಸಬೇಕು ಎನ್ನುವ ಉದ್ದೇಶ ಇದ್ದು, ಸರ್ಕಾರದ ಮಟ್ಟದಲ್ಲಿ ನಿರ್ಧಾರ ಬಾಕಿ ಇದೆ.
ಬಿ.ಶ್ರೀನಿವಾಸ್
ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ