ಚಿತ್ರದುರ್ಗ: ತಾಲೂಕಿನ ಜೋಡಿಚಿಕ್ಕೇನಹಳ್ಳಿಯಲ್ಲಿ ಮಂಗಳವಾರ ಅಪರೂಪದ ನಾಣ್ಯಗಳು ಪತ್ತೆಯಾಗಿವೆ. ಇವು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದ್ದು ಎಂಬ ಮಾಹಿತಿ ಇದೆ.
ಗ್ರಾಮದ ಆಂಜನೇಯ ಸ್ವಾಮಿ ದೇಗುಲದಲ್ಲಿ ಶಿಥಿಲಗೊಂಡಿರುವ ಗರುಡ ಕಂಬವನ್ನು ಬದಲಿಸುವ ವೇಳೆ ತಾಮ್ರದ ನಾಣ್ಯಗಳು ದೊರೆತಿವೆ. ಗ್ರಾಮದ ಪ್ರೊ.ರಘುರಾಮ್, ಲೋಕೇಶ್ ಎಂಬುವವರು ಸಂಶೋಧಕ ಡಾ. ಮಹೇಶ್ ಕುಂಚಿಗನಾಳ್ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದು, ಪರಿಶೀಲಿಸಿದ ಬಳಿಕ ಮೈಸೂರು ಮಹರಾಜರ ಕಾಲದ್ದು ಎಂಬುದನ್ನು ದೃಢೀಕರಿಸಿದ್ದಾರೆ.
ನಾಣ್ಯದ ಮೇಲೆ ಮಯಿಲಿಕಾಸುಯಿಪತ್ತು ಎಂಬ ಉಲ್ಲೇಖವಿದೆ. ರೋಮನ್ ಸಂಖ್ಯೆಯಲ್ಲಿ ಇಪ್ಪತ್ತು ಎನ್ನುವ ಬರಹದ ಜೊತೆಗೆ ಇಂಗ್ಲಿಷ್ ಅಕ್ಷರ ಅಚ್ಚಾಗಿದೆ.
ನಾಣ್ಯದ ಮತ್ತೊಂದು ಕಡೆ ‘ಶ್ರೀ’, ಆನೆಯ ತಲೆ, ದೇಹ ಯಾಳಿ ಎಂಬ ಕಾಲ್ಪನಿಕ ಪ್ರಾಣಿಯನ್ನು ಹೋಲುತ್ತದೆ. ಮಹಿ ಎಂಬುದು ರೈಸ್‌ರವರು ಗುರುತಿಸಿದಂತೆ ಮೈಸೂರಿನ ಹೆಸರಿನ ಸಂಕ್ಷಿಪ್ತ ರೂಪವಾಗಿದೆ ಎಂದು ಡಾ.ಮಹೇಶ್ ತಿಳಿಸಿದ್ದಾರೆ.
ಪ್ರಸ್ತುತ ನಾಣ್ಯವು ಕ್ರಿ.ಶ 1811 ರಿಂದ 1833ರ ವರೆಗೆ ಪ್ರಚಲಿತದಲ್ಲಿದ್ದ 20 ರೂ. ಮೌಲ್ಯದ ತಾಮ್ರದ ನಾಣ್ಯವಾಗಿದೆ. ಬ್ರಿಟಿಷ್ ರೆಸಿಡೆನ್ಸ್ ಕಾಲದಲ್ಲೂ ಕನ್ನಡಕ್ಕಿದ ಮಹತ್ವವನ್ನು ಈ ನಾಣ್ಯ ದೃಢಪಡಿಸುತ್ತದೆ. ನಾಣ್ಯದ ಕುರಿತು ಡಾ.ಶಶಿಕುಮಾರ್ ನಾಯ್ಕ ಕೂಡ ಮಾಹಿತಿ ನೀಡಿದ್ದಾರೆ.