ನ್ಯೂಸ್

ಮೈಸೂರು ಅರಸರು ಪ್ರಗತಿಯ ಪ್ರವರ್ತಕರು

ಮೈಸೂರು ಅರಸರು ಸಾಮಾಜಿಕ ಪರಿವರ್ತನೆ ಮತ್ತು ಪ್ರಗತಿಯ ಪ್ರವರ್ತಕರು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಬಣ್ಣಿಸಿದರು.

ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ನವಜ್ಯೋತಿ ಸಭಾಂಗಣದಲ್ಲಿ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಪ್ರಾಚ್ಯ ವಿದ್ಯಾ ಸಂಶೋಧನಾಲಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಮುಮ್ಮಡಿ ಕೃಷ್ಣರಾಜ ಒಡೆಯರ ಸಾಂಸ್ಕೃತಿಕ ಕೊಡುಗೆಗಳು’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಬದಲಾವಣೆಯಾಗಬೇಕಿದ್ದಲ್ಲಿ ಶಿಕ್ಷಣ ಅಗತ್ಯ ಎನ್ನುವುದನ್ನು ಮನಗಂಡ ಮುಮ್ಮಡಿ ಕೃಷ್ಣರಾಜ ಒಡೆಯರ್ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅರಸರು ಕನ್ನಡ ಮತ್ತು ಸಂಸ್ಕೃತ ಭಾಷೆ ಒಳಗೊಂಡಂತೆ ಐವತ್ತೆಂಟು ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ರಾಜರು ಉತ್ತಮ ಪಾಂಡಿತ್ಯ ಪಡೆದಿದ್ದರು. ಇದು ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು ಎಂದು ತಿಳಿಸಿದರು.

ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ ಮಾತನಾಡಿ, ಮೈಸೂರು ಅರಸರ ಕೊಡುಗೆ ಸದಾ ಸ್ಮರಣೀಯ. ಅದರಲ್ಲೂ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರು ಲೋಕಕಲ್ಯಾಣ ಕಾರ್ಯ ಮಾಡುವಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರು ಪ್ರಜೆಗಳ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣವುಳ್ಳವರಾಗಿದ್ದರು. ಯುದ್ಧ ಕಲೆ, ನ್ಯಾಯ ನೀತಿ, ಗಣಿತಶಾಸ್ತ್ರ ಕುರಿತಂತೆ ಅಪಾರ ಪಾಂಡಿತ್ಯ ಪಡೆದಿದ್ದರು. ಕರ್ನಾಟಕವಲ್ಲದೆ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡುಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ ಮಾತನಾಡಿ, ಮೈಸೂರು ಅರಸರು ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶಕ್ಕೆ ಮಾದರಿಯಾಗುವ ಕಾರ್ಯಗಳನ್ನು ಮಾಡಿದ್ದಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಬದುಕು ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು. ರಾಜರು ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಸಂಯಮಗಳನ್ನು ಗಳಿಸಿಕೊಂಡಿದ್ದರು. ಇವರ ಕಾರ್ಯ ಪ್ರಶಂಸನೀಯ ಎಂದರು.

ಬಳಿಕ ನಿವೃತ್ತ ತಹಸೀಲ್ದಾರ್ ರಂಗನಾಥ ಅವರು ‘ಮುಮ್ಮಡಿ ಕೃಷ್ಣರಾಜ ಒಡೆಯರ ಸಮಾಜ ಕಲ್ಯಾಣ ಕಾರ್ಯಗಳು’, ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಉಪ ನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ ಅವರು ‘ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಸಾಹಿತ್ಯ ಕೃತಿಗಳಲ್ಲಿ ಶ್ರೀತತ್ತ್ವನಿಧಿ’ ಹಾಗೂ ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜರಾವ್ ಅವರು ‘ಮುಮ್ಮಡಿ ಕೃಷ್ಣರಾಜ ಒಡೆಯರ ಇತರ ಸಾಹಿತ್ಯ ಮತ್ತು ಧಾರ್ಮಿಕ ಕೃತಿಗಳು’ ವಿಷಯ ಕುರಿತು ಪ್ರಬಂಧ ಮಂಡಿಸಿದರು.

ಪ್ರಾಂಶುಪಾಲ ಡಾ.ರೇಚಣ್ಣ, ಸಂಚಾಲಕರಾದ ಡಾ.ಎ.ಜಿ.ಧರ್ಮೇಶ ಇದ್ದರು.