ನ್ಯೂಸ್

ಮೈಸೂರಿನತ್ತ ಪ್ರವಾಸಿಗರ ದಂಡು

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರವಾಸಿಗರು ಮುಖ ಮಾಡಿದ್ದು, ನಗರದ ಬಹುತೇಕ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ.

ಈಗಂತೂ ನಗರದಲ್ಲಿ ಎಲ್ಲಿ ನೋಡಿದರೂ ಜನವೋ ಜನ. ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಕಿಕ್ಕಿರಿದು ಜನರು ತುಂಬಿರುವುದರಿಂದ ಚುಮು ಚುಮು ಚಳಿಯಲ್ಲಿಯೂ ಹಿಗ್ಗಿನ ವಾತಾವರಣ ಮನೆ ಮಾಡಿದೆ.

ನಗರದ ಹೃದಯ ಸ್ಥಾನವಾದ ಅರಮನೆಯಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜನೆ ಮಾಡಿರುವುದರಿಂದ ಜನರು ಮೊದಲೇ ಹೆಚ್ಚಾಗಿ ಸೇರುತ್ತಿದ್ದರು. ಈಗ ರಜೆ ಬಂದಿರುವುದರಿಂದ ಎರಡು-ಮೂರು ಪಟ್ಟು ಹೆಚ್ಚಿನ ಜನರು ಹೂವಿನ ಅಂದವನ್ನು ಕಣ್ತುಕೊಳ್ಳುತ್ತಿದ್ದಾರೆ. ಇನ್ನೂ ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿ ಬೆಟ್ಟ, ದಸರಾ ವಸ್ತುಪ್ರದರ್ಶನ ಆವರಣ, ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಕೂಡ ಅರಮನೆಯ ಸ್ಥಿತಿಯೇ ಪ್ರತಿಬಿಂಬದಂತೆ ಇದೆ. ಎತ್ತ ನೋಡಿದರೂ ಜನರೇ. ಗುಂಪುಗುಂಪಾಗಿ ಸಂಚರಿಸುತ್ತಾ ಖುಷಿಪಡುತ್ತಿದ್ದಾರೆ. ಅಲ್ಲದೆ ನಗರ ಮಾಲ್‌ಗಳು ಭರ್ತಿಯಾಗಿವೆ.