ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 
ನ್ಯೂಸ್

ಮೈಸೂರಿನ ಸವಾರ್ಂಗೀಣ ಅಭಿವೃದ್ಧಿಗೆ ಪಣ

ಮೈಸೂರಿನ ಸವಾರ್ಂಗೀಣ ಅಭಿವೃದ್ಧಿಗೆ ಪಣತೊಡಲಾಗಿದ್ದು, ಈ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಜಧಾನಿಯಲ್ಲಿ ಕೆಲವು ಮಹತ್ವದ ಯೋಜನೆಗಳಿಗೆ ನೆರವು ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ, ಮೈಸೂರು ಕ್ಷೇತ್ರದಲ್ಲಿ ಆಗಬೇಕಾಗಿರುವ ಯೋಜನೆಗಳ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪಾರಂಪರಿಕ ಕಟ್ಟಡಗಳು ಹಾಗೂ ವಿಶೇಷವಾಗಿ ಕೃಷ್ಣರಾಜ ಬೌಲೆವಾರ್ಡ್‌ನಲ್ಲಿರುವ ಕಟ್ಟಡಗಳನ್ನು ಸಮಗ್ರವಾಗಿ ನವೀಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ, ನೆರವು ಬೇಕಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಪಾರಂಪರಿಕ ಕಟ್ಟಡಗಳು ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಕೊಟ್ಟಿವೆ. ಮೈಸೂರು ಸಂಸ್ಥಾನದ ಒಡೆಯರ್ ಆಳ್ವಿಕೆಯಲ್ಲಿ 20ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾದ ಈ ಕಟ್ಟಡಗಳು ಆಧುನಿಕ ಶಿಕ್ಷಣಕ್ಕೆ ಮತ್ತು ಭಾರತೀಯ ಪಾರಂಪರಿಕ ಶ್ರೀಮಂತಿಕೆ ಮೈಸೂರಿನ ಕೊಡುಗೆಗಳಾಗಿವೆ ಎಂದು ವಿವರಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ. ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಯುವರಾಜ ಕಾಲೇಜು, ಮಹಾರಾಜ ಕಾಲೇಜುಗಳು, ವಿದ್ವಾಂಸರು, ಕಲಾವಿದರು ಮತ್ತು ನಾಯಕರನ್ನು ಪೋಷಿಸಿದ ಇತಿಹಾಸ ಹೊಂದಿದೆ. ಇದನ್ನು ಸಂರಕ್ಷಿಸಬೇಕಾದ ಅಗತ್ಯವನ್ನು ಸಚಿವರಿಗೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ. ಇಂಡೋ-ಸಾರ್ಸೆನಿಕ್ ಮತ್ತು ಶಾಸ್ತ್ರೀಯ ಯುರೋಪಿಯನ್ ಶೈಲಿ ಸಮ್ಮಿಲನದ ಈ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕಾಗಿದೆ. ಕೇಂದ್ರ ಬಜೆಟ್ ಅಥವಾ ಇತರ ಸೂಕ್ತ ಕಾರ್ಯವಿಧಾನಗಳ ಮೂಲಕ ಪರಂಪರೆ ಸಂರಕ್ಷಣೆ ಅಥವಾ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ವಿಶೇಷ ಆರ್ಥಿಕ ನೆರವು ನೀಡಿದರೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರಿಗೆ ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.

ಕಸ್ಟಮ್ಸ್ ಕಚೇರಿ ಅಗತ್ಯವಿದೆ

ನಮ್ಮ ಮೈಸೂರಿನ ಕಡಕೋಳ ಮಲ್ಟಿ ಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಅನ್ನು ಪೂರ್ಣಗೊಳಿಸಲಾಗಿದ್ದು, ಇದೊಂದು ಉತ್ತಮ ಸೌಲಭ್ಯವಾಗಿದೆ. ಕಸ್ಟಮ್ಸ್ ಕ್ಲಿಯರೆನ್ಸ್‌ಗೆ ಅನುಕೂಲವಾಗುವಂತೆ ಕಚೇರಿಯನ್ನು ಸ್ಥಾಪಿಸಲು ವಿನಂತಿ ಮಾಡಲಾಯಿತು ಎಂದು ಸಂಸದರು ತಿಳಿಸಿದ್ದಾರೆ.

ಕರಿಮೆಣಸಿನ ಮೇಲಿನ ಶೇ.18 ಜಿಎಸ್‌ಟಿಯನ್ನು ತೆಗೆದುಹಾಕಿದ್ದಕ್ಕಾಗಿ ಸಮಸ್ತ ಕೊಡಗು ಜಿಲ್ಲೆಯ ಜನತೆ ಪರವಾಗಿ ಕೇಂದ್ರ ಸಚಿವರಿಗೆ ಧನ್ಯವಾದಗಳನ್ನು ತಿಳಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ನನ್ನ ಎಲ್ಲ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಹಣಕಾಸು ಸಚಿವರು, ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅತಿ ಶೀಘ್ರದಲ್ಲೇ ಮೈಸೂರಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಕ್ಕೆ ಬರಲಿವೆ ಎಂದು ಸಂಸದ ಯದುವೀರ್ ವಿವರಿಸಿದ್ದಾರೆ.