ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ತೆರೆಬಿದ್ದು, ಮೂರು ದಿನವಾದರೂ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ವಿದ್ಯುತ್ ದೀಪಾಲಂಕಾರ, ವಸ್ತುಪ್ರದರ್ಶನ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬರುತ್ತಿದೆ.
ಸಾಲು ಸಾಲು ರಜೆ ಜತೆಗೆ ವಾರಾಂತ್ಯ ರಜೆ ಹಿನ್ನೆಲೆ ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ ಹಾಗೂ ವಸ್ತುಪ್ರದರ್ಶನದಲ್ಲೂ ಜನದಟ್ಟಣೆ ಕಂಡು ಬರುತ್ತಿದೆ. ಪರಿಣಾಮ ನಗರದ ಹೃದಯ ಭಾಗದಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗದ ಮಟ್ಟಿಗೆ ಸಂಚಾರ ದಟ್ಟಣೆ ಉಂಟಾಯಿತು. ಈ ವೇಳೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.
ಭಾನುವಾರವೂ ನಗರದ ಅರಮನೆ, ಮೃಗಾಲಯ, ಆಹಾರ ಮೇಳ, ಚಾಮುಂಡಿಬೆಟ್ಟ, ವಸ್ತುಪ್ರದರ್ಶನ...ಹೀಗೆ ಎಲ್ಲ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರ ದಂಡ ಕಂಡು ಬಂದಿತು.
ದಸರಾದ ವಿಜಯದಶಮಿಯಂದು ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ 27 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆಯುಧಪೂಜೆ ದಿನ 25 ಸಾವಿರ ಹಾಗೂ ನಿತ್ಯವೂ 15ರಿಂದ 20 ಸಾವಿರ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.
ಕಳೆದ 11 ದಿನಗಳಲ್ಲಿ ವಸ್ತು ಪ್ರದರ್ಶನಕ್ಕೆ ದಾಖಲೆ ಪ್ರವಾಸಿಗರು ಭೇಟಿ ನೀಡಿದ್ದು, ಆಯುಧಪೂಜೆ ದಿನದಂದು 1 ಲಕ್ಷಕ್ಕೂ ಅಧಿಕ ಮಂದಿ ವಸ್ತುಪ್ರದರ್ಶನ ಕಣ್ತುಂಬಿಕೊಂಡಿದ್ದಾರೆ. ಅದನ್ನು ಹೊರತುಪಡಿಸಿದರೆ ನಿತ್ಯವೂ ಕನಿಷ್ಠ 70ರಿಂದ 80 ಸಾವಿರ ಮಂದಿ ಭೇಟಿ ನೀಡಿದ್ದಾರೆ. 11 ದಿನದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ವಸ್ತುಪ್ರದರ್ಶನಕ್ಕೆ ಬಂದು ಹೋಗಿದ್ದಾರೆ.