ನ್ಯೂಸ್

ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿಗಳು

ನಗರದಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದರು.

ಸೋಮವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಿಂದ ವಿಶೇಷ ವಿಮಾನದಲ್ಲಿ ಹೊರಟು 3.10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇದರೊಂದಿಗೆ 2022ರಲ್ಲಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಎರಡನೇ ಬಾರಿಗೆ ಮೈಸೂರಿಗೆ ಆಗಮಿಸಿದ್ದಾರೆ.

ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಂಡರು. ನಂತರ ರಸ್ತೆ ಮಾರ್ಗವಾಗಿ ಹೋಟೆಲ್ ರ‌್ಯಾಡಿಸನ್ ಬ್ಲೂಗೆ ಆಗಮಿಸಿ ಕೆಲ ಹೊತ್ತು ವಿಶ್ರಾಂತಿ ಪಡೆದರು. ಅಲ್ಲಿಂದ ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯ ವಜ್ರ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ತೆರಳಿದರು. ಸಮಾರಂಭದ ಬಳಿಕ ರಾಷ್ಟ್ರಪತಿ ರ‌್ಯಾಡಿಸನ್ ಬ್ಲೂ ಹೋಟೆಲ್‌ಗೆ ತೆರಳಿ ವಾಸ್ತವ್ಯ ಹೂಡಿದರು.

ರಾಷ್ಟ್ರಪತಿ ಸ್ವಾಗತಿಸುವ ವೇಳೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಗೌರವಗುಪ್ತ, ಮೈಸೂರಿನ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು ಇದ್ದರು.

ಇಂದು ಅರಮನೆ ಭೇಟಿ:

ಮಂಗಳವಾರ ಬೆಳಗ್ಗೆ ಬೆ.8.40ಕ್ಕೆ ಅರಮನೆಗೆ ತೆರಳಿ ಮೈಸೂರು ರಾಜಮನೆತನದಿಂದ ಆತಿಥ್ಯ ಸ್ವೀಕಾರ ಮಾಡಲಿದ್ದಾರೆ. ನಂತರ ಅರಮನೆಯನ್ನು ವೀಕ್ಷಣೆ ಮಾಡಲಿದ್ದಾರೆ.

ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಆದ್ಯವೀರ್ ಒಡೆಯರ್ ಅವರೊಂದಿಗೆ ಮುರ್ಮು ಉಪಾಹಾರ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಅರಮನೆಯ ದರ್ಬಾರ್ ಹಾಲ್, ಮ್ಯೂಸಿಯಂ ಮತ್ತಿತರ ಸ್ಥಳಗಳ ವೀಕ್ಷಣೆ ಬಳಿಕ ಬೆಳಗ್ಗೆ 10 ಗಂಟೆಗೆ ಅರಮನೆಯಿಂದ ನಿರ್ಗಮಿಸಿ 10.20ಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿ 10.30ಕ್ಕೆ ವಿಶೇಷ ವಿಮಾನದಲ್ಲಿ ಚೆನ್ನೈಗೆ ತೆರಳಲಿದ್ದಾರೆ.

ಸಾರ್ವಜನಿಕರಿಗೆ ನಿರ್ಬಂಧ

ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಭೇಟಿ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಯಿಂದಲೇ ಅರಮನೆ ಮತ್ತು ಚಾಮುಂಡಿಬೆಟ್ಟಕ್ಕೆ ಪ್ರವಾಸಿಗರು, ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಗಿತ್ತು. ಅರಮನೆಗೆ ಮಂಗಳವಾರ ಮಧ್ಯಾಹ್ನದ ವರೆಗೂ ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಗಿದೆ.

ರಾಷ್ಟ್ರಪತಿ ಅವರು ತೆರಳುವ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಮಧ್ಯಾಹ್ನದ ಬಳಿಕ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಜನರ ಓಡಾಟಕ್ಕೂ ನಿರ್ಬಂಧಿಸಲಾಗಿದೆ. ನಗರದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೇ ಪೊಲೀಸರು ಭದ್ರತೆ ಒದಗಿಸಲು ಕ್ರಮವಹಿಸಿದರು.

ಮುರ್ಮು ಅವರಿಗೆ ವಾಸ್ತವ್ಯಕ್ಕೆ ಹೋಟೆಲ್ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಪರ್ಯಾಯವಾಗಿ ಸರ್ಕಾರಿ ಅತಿಥಿಗೃಹದಲ್ಲೂ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಹಾಗೂ ಸ್ವಚ್ಛತೆ ಕಾರ್ಯ ನಡೆಸಲಾಗಿದೆ.

ಹೊಸದಿಲ್ಲಿಯಿಂದ ಆಗಮಿಸಿರುವ ಭದ್ರತಾಪಡೆ ಅಧಿಕಾರಿಗಳು ಸೋಮವಾರವೂ ನಗರದಲ್ಲಿ ಪರಿಶೀಲನೆ ನಡೆಸಿದರು. ರಾಷ್ಟ್ರಪತಿಗಳು ವಾಸ್ತವ್ಯ ಹೂಡುವ ಹೋಟೆಲ್, ಆಯುಷ್ ಸಭಾಂಗಣ, ಚಾಮುಂಡಿಬೆಟ್ಟ, ಅರಮನೆ ಪ್ರದೇಶಗಳನ್ನು ಪರಿಶೀಲಿಸಿದರು. ನಗರ ಪೊಲೀಸ್ ಆಯುಕ್ತರು ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ವಿವರಿಸಿದರು.