ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕೆ.ಈರೇಗೌಡ ಅವಿರೋಧವಾಗಿ ಆಯ್ಕೆಯಾದರು.
ಆರ್.ಚೆಲುವರಾಜು ಅವರು ನೀಡಿದ್ದ ರಾಜೀನಾಮೆಯಿಂದ ಮೈಮುಲ್ ಅಧ್ಯಕ್ಷ ಸ್ಥಾನ ತೆರವುಗೊಂಡಿತ್ತು. ಹೀಗಾಗಿ ನೂತನ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕೆ.ಈರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಬನ್ನೂರು ರಸ್ತೆಯಲ್ಲಿರುವ ಮೆಗಾ ಡೇರಿ ನಂದಿನಿ ಆಡಳಿತ ಮಂಡಳಿ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ 10.30ರಿಂದ 12ಗಂಟೆತನಕ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಯಾಗಿತ್ತು. ಕೆ.ಈರೇಗೌಡ ಅವರು ನಿರ್ದೇಶಕರೊಂದಿಗೆ ಸೂಚಕರು, ಅನುಮೋದಕರ ಸಹಿಯುಳ್ಳ ಎರಡು ಸೆಟ್ ನಾಮಪತ್ರ ಸಲ್ಲಿಸಿದರು. 12 ಗಂಟೆಯೊಳಗೆ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಮಧ್ಯಾಹ್ನ 12 ಗಂಟೆಗೆ ಚುನಾವಣಾಧಿಕಾರಿ, ಲೆಕ್ಕ ಪರಿಶೋಧನಾ ಜಂಟಿ ನಿಬಂಧಕ ಶ್ರೀಧರ್ ಚುನಾವಣಾ ಪ್ರಕ್ರಿಯೆ ಆರಂಭಿಸಿದರು.
ಮೊದಲಿಗೆ ನಾಮಪತ್ರ ಪರಿಶೀಲಿಸಿದರು. ಅಮೇಲೆ ವಾಪಸ್ ಪಡೆಯಲು ಸಮಯ ಕೊಟ್ಟರು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ನೂತನ ಅಧ್ಯಕ್ಷ ಕೆ. ಈರೇಗೌಡರಿಗೆ ಚುನಾವಣಾಧಿಕಾರಿ ಶ್ರೀಧರ್, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್‌ನಾಯಕ್ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.
ಅಧ್ಯಕ್ಷರ ಚುನಾವಣೆಯಲ್ಲಿ ಎಲ್ಲ ನಿರ್ದೇಶಕರು ಹಾಜರಿದ್ದರು. ನಾಮಪತ್ರ ಸಲ್ಲಿಕೆ ಸಲ್ಲಿಸುವಾಗ ಹಾಜರಿದ್ದ ಸದಸ್ಯರು ಬಳಿಕ ಹೊರಗೆ ತೆರಳಿದ್ದರು. ಮತ್ತೆ 12ಗಂಟೆಗೆ ಆಡಳಿತ ಮಂಡಳಿ ಸಭಾಂಗಣಕ್ಕೆ ಆಗಮಿಸಿ ಅಧ್ಯಕ್ಷರ ಆಯ್ಕೆಯಾಗುವ ತನಕ ಹಾಜರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರಾದ ಆರ್.ಚೆಲುವರಾಜು, ಎ.ಟಿ.ಸೋಮಶೇಖರ್, ಕೆ.ಜಿ.ಮಹೇಶ್, ಪಿ.ಎಂ.ಪ್ರಸನ್ನ, ಸಿ.ಓಂಪ್ರಕಾಶ್, ಕೆ.ಉಮಾಶಂಕರ್, ಕೆ.ಎಸ್.ಕುಮಾರ್, ದ್ರಾಕ್ಷಾಯಿಣಿ, ಬಿ.ಕೆ.ಲೀಲಾ, ನೀಲಾಂಬಿಕೆ ಮಹೇಶ್ ಕುರುಹಟ್ಟಿ, ಎ.ಶಿವಗಾಮಿ, ಬಿ.ಎನ್.ಸದಾನಂದ, ನಾಮನಿರ್ದೇಶಿತ ಸದಸ್ಯರಾದ ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ, ಸರ್ಕಾರದ ಪ್ರತಿನಿಧಿಗಳಾಗಿರುವ ಸಹಕಾರ ಸಂಘಗಳ ಜಂಟಿ ನಿಬಂಧಕ ಸಿ.ಪ್ರಸಾದ್ ರೆಡ್ಡಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ನಾಗರಾಜು, ಕೆಎಂಎಫ್‌ನ ಪ್ರತಿನಿಧಿ ಎಂ.ಕೃಷ್ಣಪ್ಪ ಇತರರಿದ್ದರು.