ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಶಾಖೆ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ಮೈಬಿಲ್ಡ್-24’ ವಸ್ತುಪ್ರದರ್ಶನಕ್ಕೆ ಗುರುವಾರ ಚಾಲನೆ ದೊರೆಯಿತು.
ತುರುವೇಕೆರೆ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹಾಗೂ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪ್ರದರ್ಶನ ಉದ್ಘಾಟಿಸಿ ಶುಭಕೋರಿದರು. ಶಾಖೆಯ ಜಿಲ್ಲಾಧ್ಯಕ್ಷ ಎ.ಎಸ್.ಯೋಗಾನರಸಿಂಹ, ಸಂಸ್ಥೆಯ ಪದಾಧಿಕಾರಿಗಳಾದ ಕೆ.ಟಿ.ಗೋವಿಂದರಾಜು, ಕೆ.ಆರ್.ಪ್ರಭಾಕರ್, ಎಸ್.ಎಲ್.ದಿನೇಶ್ ಇದ್ದರು.
ಈ ಬಾರಿ ವಸ್ತುಪ್ರದರ್ಶನದಲ್ಲಿ ಕಟ್ಟಡ ನಿರ್ಮಾಣದಲ್ಲಿನ ಇತ್ತೀಚಿನ ಆವಿಷ್ಕಾರ, ಕಟ್ಟಡ ಸಾಮಗ್ರಿಗಳ ಸಮಗ್ರ ಪರಿಚಯ ಮಾಡಲಾಗಿದೆ. ದೇಶ, ವಿದೇಶಗಳ ಕಟ್ಟಡ ಸಾಮಗ್ರಿಯನ್ನು ಇಲ್ಲಿ ನೋಡಬಹುದಾಗಿದೆ. ಸೌರಶಕ್ತಿ ಯೋಜನೆ, ನವೀನ ಮಾದರಿಯ ನೆಲಹಾಸು, ವಿದ್ಯುತ್ ಉಪಕರಣ, ಕಟ್ಟಡ ನಿರ್ಮಾಣ ಯಂತ್ರಗಳು, ಜಲಸಂರಕ್ಷಣಾ ವಿಧಾನ, ಅಡುಗೆ ಮನೆ, ಸ್ನಾನ ಗೃಹದ ಅಲಂಕಾರಿಕ ಸಾಮಗ್ರಿ, ವಿಶೇಷ ರೀತಿಯ ರೂಫ್ ಸಾಮಗ್ರಿ, ಹೊರಾಂಗಣ ನೆಲಹಾಸು, ನವೀನ ರೀತಿಯ ಬಣ್ಣ ಮತ್ತು ಎಂ-ಸ್ಯಾಂಡ್ ಅರಿವು ಮೂಡಿಸುವ ಮಳಿಗೆಗಳು ಇವೆ.
ಡಿ. 16ರವರೆಗೆ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ವಸ್ತುಪ್ರದರ್ಶನ ತೆರೆದಿರಲಿದೆ. ಪ್ರವೇಶ ಶುಲ್ಕ 30 ರೂ. ನಿಗದಿಪಡಿಸಲಾಗಿದೆ. ಜತೆಗೆ, ನಿತ್ಯ ಸಂಜೆ 6.30ರಿಂದ ರಾತ್ರಿ 8.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ನಗರದ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ ನೀಡಲು ವಾಯ್ಸ ಆಫ್ ಮೈಬಿಲ್ಡ್-24 ಹಮ್ಮಿಕೊಳ್ಳಲಾಗಿದೆ.