ನ್ಯೂಸ್

ಮೈತ್ರಿ ಪಕ್ಷಗಳು ಬೆಳೆ ಪರಿಹಾರ ಮೊತ್ತ ಹೆಚ್ಚಿಸಲಿ

ಚಿತ್ರದುರ್ಗ: ಓಬಿರಾಯನ ಕಾಲದ ನಿಯಮಾನುಸಾರ ಬೆಳೆ ನಷ್ಟ ಪರಿಹಾರ ನೀಡಿದರೆ, ಯಾವುದಕ್ಕೂ ಸಾಲದು. ರಾಜ್ಯದ ಬಿಜೆಪಿ-ಜೆಡಿಎಸ್ ನಾಯಕರಿಗೆ ರೈತಪರ ಕಾಳಜಿ ಇದ್ದರೆ, ಕೇಂದ್ರ ಸರ್ಕಾರದ ಗಮನ ಸೆಳೆದು ಹೆಚ್ಚಿಸಲು ಹೊಸ ನಿಯಮ ಜಾರಿಗೊಳಿಸಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಗಾರು ವೇಳೆ ಎಲ್ಲ ಹಾನಿಗೂ ಪರಿಹಾರ ನೀಡಿದ್ದೇವೆ. ಕಾಂಗ್ರೆಸ್ ರೈತವಿರೋಧಿ ಎಂಬ ಉಡಾಫೆ ಹೇಳಿಕೆ ಬಿಟ್ಟು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪರಿಹಾರದ ಮೊತ್ತ ಹೆಚ್ಚಳಕ್ಕೆ ಏಕೆ ಪ್ರಯತ್ನಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಪ್ರಾಥಮಿಕ ಮಾಹಿತಿ ಅನ್ವಯ 56 ಸಾವಿರ ಹೆಕ್ಟೇರ್ ಬೆಳೆ, ಅನೇಕ ಮನೆಗಳು, 115 ಜನರ ಪ್ರಾಣಕ್ಕೆ ಹಾನಿಯಾಗಿದೆ. ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸುತ್ತಿದ್ದು, ಮುಂದಿನ ನಾಲ್ಕೈದು ದಿನದೊಳಗೆ ಹಾನಿಯ ಸ್ಪಷ್ಟ ಚಿತ್ರಣ ತಿಳಿಯಲಿದೆ. ವರದಿ ಕೈ ಸೇರುತ್ತಿದ್ದಂತೆ ಪರಿಹಾರ ನೀಡಲಾಗುವುದು. ಅದಕ್ಕಾಗಿ 666 ಕೋಟಿ ರೂ. ಅನುದಾನ ಲಭ್ಯವಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಅ. 26ರಂದು ಮಳೆ ಹಾನಿ ಸಂಬಂಧ ಪರಿಶೀಲನಾ ಸಭೆ ನಡೆಯಲಿದೆ ಎಂದರು.

ಬಿಜೆಪಿಯ 10 ಶಾಸಕರು ಕೈ ಸಂಪರ್ಕದಲ್ಲಿದ್ದಾರೆ. ಹಾಗಾದರೆ, ರಾಜ್ಯದಲ್ಲಿ ಯಾವ ಪಕ್ಷ ಮುಳುಗುತ್ತಿರುವ ಹಡಗು ಎಂಬುದನ್ನು ತಿಳಿದುಕೊಳ್ಳಲಿ ಎಂದು ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವುದಾಗಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿಯ ಒಕ್ಕಲಿಗ ಶಾಸಕರಲ್ಲೂ ಚಿಂತೆಯಾಗಿದೆ. ಆ ರೇಸ್‌ನಲ್ಲಿರುವ ವಿಜಯೇಂದ್ರಗೂ ಟೆನ್ಷನ್ ಶುರುವಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿಗಳ ಮೂಲಕ ವಾರ್ಷಿಕ 56 ಸಾವಿರ ಕೋಟಿ ರೂ. 4.5 ಕೋಟಿ ಕನ್ನಡಿಗರ ಮನೆಗೆ ತಲುಪುತ್ತಿದೆ. ಬಿಜೆಪಿಯಾಗಿದ್ದರೆ, ಅಂಬಾನಿ, ಅದಾನಿ ಕಂಪನಿ ಪಾಲಾಗುತ್ತಿತ್ತು. ಇಲ್ಲಿ ಸರ್ಕಾರ ಪತನಗೊಳಿಸುವ ಪ್ರಯತ್ನ ಫಲಿಸದು ಎಂದು ವಾಗ್ದಾಳಿ ನಡೆಸಿದರು.