ಚಿತ್ರದುರ್ಗ: ಸಾಲ ಪ್ರಮಾಣ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ ಹಾಗೂ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ನಿಯಂತ್ರಣಕ್ಕೆ ಆಗ್ರಹಿಸಿ ಜ.29 ರಂದು ಬೆಂಗಳೂರಿನ ಆರ್‌ಬಿಐ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಕ್ಷೇತ್ರ ಸದೃಢಗೊಳಿಸಲು ಸ್ಥಾಪನೆಯಾಗಿರುವ ನಬಾರ್ಡ್, ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಮಂಜೂರು ಮಾಡುತ್ತಿದ್ದ ಮೊತ್ತ ಕಡಿತಗೊಳಿಸಿದೆ. ಕೇಂದ್ರ ಸರ್ಕಾರವೂ ಕಳೆದ 3 ವರ್ಷಗಳಿಂದ, ಪ್ರತಿವರ್ಷ ಕೃಷಿ ಕ್ಷೇತ್ರದ ಸಾಲದ ಮೊತ್ತ ಕಡಿಮೆ ಮಾಡುತ್ತಿದೆ. ಕಳೆದ ಆರ್ಥಿಕ ಸಾಲಿನಲ್ಲಿ ರಾಜ್ಯಕ್ಕೆ ನಬಾರ್ಡ್ 5600 ಕೋಟಿ ರೂ. ಕೊಟ್ಟಿತ್ತು. ಈ ವರ್ಷ 2340 ಕೋಟಿ ರೂ.ಗೆ ಕುಸಿದಿದೆ.
ಐದು ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದ ಅಲ್ಪಾವಧಿ ಹಾಗೂ ರಿಯಾಯತಿ ಬಡ್ಡಿ ದರದಲ್ಲಿ 15 ಲಕ್ಷ ರೂ.ವರೆಗಿನ ಮಧ್ಯ ಮಾವಧಿ,ದೀರ್ಘಾವಧಿ ಕೃಷಿ ಸಾಲಕ್ಕೆ ಹೊಡೆತ ಬೀಳುತ್ತಿದೆ. ಶೂನ್ಯಬಡ್ಡಿ ದರದಲ್ಲಿ 30 ಲಕ್ಷ ರೈತರು ಪಡೆಯುತ್ತಿದ್ದ ಸಾಲಕ್ಕೆ ಕುತ್ತು ಉಂಟಾಗಿದೆ. ಸಾಲಕ್ಕಾಗಿ ವಾಣಿಜ್ಯ ಬ್ಯಾಂಕ್‌ಗಳ ಮೊರೆ ಹೋಗುವಂತಾಗಿದೆ. ಖಾಸಗಿ ಸಾಲದ ಸುಳಿಗೆ ಸಿಲುಕಿಕೊಳ್ಳುವಂತಾಗಿದೆ.
ರೈತರ ಸ್ಥಿರಾಸ್ತಿಗಳು ಹರಾಜಾಗುತ್ತವೆ. ಪ್ರತಿ 36 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆಗೆ ಒಳಗಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರ ಇಡೀ ಕೃಷಿ ವ್ಯವಸ್ಥೆ ನಾಶಕ್ಕೆ ಹಾಗೂ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳ ವಶಕ್ಕೆ ವಹಿಸುವ ಹುನ್ನಾರ ನಡೆಸಿದೆ. ಹೈನುಗಾರಿಕೆ, ಕೋಳಿ, ಮೀನು ಸಾಕಣಿಕೆ, ಇತರೆ ಕೃಷಿ ಪೂರಕ ಚಟುವಟಿಕೆಗಳ ಸಾಲದ ಸಹಾಯಧನದ ನೆರವು ಬಂದ್ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಗ್ರಾಮೀಣ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಲವರು ಊರುಗಳನ್ನೇ ತೊರೆಯುತ್ತಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲೆಯಿಂದ ಅಂದಾಜು 200 ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತಿಪ್ಪೇಸ್ವಾಮಿ ಮಲ್ಲಾಪುರ, ಕುಮಾರ್, ರುದ್ರಸ್ವಾಮಿ ಚಿಕ್ಕಪ್ಪನಹಳ್ಳಿ ಇದ್ದರು.